ಪಿಥೋರಾಗಢ(ಉತ್ತರಾಖಂಡ): ಹಿಮಪಾತಕ್ಕೆ ಸಿಲುಕಿ ಮೃತಪಟ್ಟ ಪರ್ವತಾರೋಹಿಗಳ ಮೃತದೇಹಗಳನ್ನು ನಂದಾ ದೇವಿ ಪ್ರದೇಶದಿಂದ ಮುನ್ಸಾರಿಗೆ ತರಲಾಗಿದೆ. ಇಂಡೋ-ಟಿಬೇಟಿಯನ್ ಗಡಿ ಭದ್ರತಾ ಪೊಲೀಸರು (ಐಟಿಬಿಪಿ) ಹಿಮದ ರಾಶಿಯ ಕೆಳಗಿದ್ದ ಶವಗಳನ್ನು ಪತ್ತೆ ಹಚ್ಚಿ ಸಾಗಿಸುವ ಕಾರ್ಯ ಮಾಡಿದರು.
ಕಳೆದ ಮೇ 26 ರಂದು ನಂದಾದೇವಿ ಪರ್ವತಾರೋಹಣಕ್ಕೆ ತೆರಳಿದ್ದ ಎಂಟು ಜನರು ಹಿಮಪಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದರು. ಹೀಗೆ ಮರಣ ಹೊಂದಿದ್ದ ಎಂಟು ಜನರ ಪೈಕಿ ಏಳು ಜನರ ಮೃತ ದೇಹಗಳು ಪತ್ತೆಯಾಗಿದ್ದು, ಹವಾಮಾನ ವೈಪರೀತ್ಯದಿಂದ ಇನ್ನೊಂದು ಮೃತ ದೇಹವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಪತ್ತೆಯಾದ ಏಳು ಮೃತ ದೇಹಗಳಲ್ಲಿ ನಾಲ್ಕು ಜನರ ಶವಗಳನ್ನು ಈಗಾಗಲೇ ಮುನ್ಸಾರಿಗೆ ಸಾಗಿಸಲಾಗಿದೆ. ಇನ್ನುಳಿದ ಮೃತದೇಹಗಳನ್ನು ಶೀಘ್ರದಲ್ಲಿ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರ್ವತಾರೋಹಿಗಳು ನಂದಾ ದೇವಿ ಪೂರ್ವ ಶಿಖರ ಭಾಗದಲ್ಲಿದ್ದ ವೇಳೆ ಅತಿಯಾದ ಹಿಮಪಾತಕ್ಕೆ ಸಿಲುಕಿ ಇವರೆಲ್ಲ ಹಿಮ ಸಮಾಧಿಯಾಗಿದ್ದರು. ಐಟಿಬಿಪಿಯ 10 ಸದಸ್ಯರ ತಂಡವು ಆಪರೇಷನ್ "ಡೇರ್‌ಡೆವಿಲ್' ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 21,000 ಅಡಿಗಳಷ್ಟು ಎತ್ತರದಲ್ಲಿ ಮೃತ ದೇಹಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಎರಡು ಐಎಎಫ್ ಚೀತಾ ಕಾಪ್ಟರ್ಗಳನ್ನು ಬಳಸಲಾಗಿತ್ತು.
ಮೃತಪಟ್ಟವರಲ್ಲಿ 4 ಬ್ರಿಟಿಷ್ ಪ್ರಜೆಗಳು, 2 ಅಮೆರಿಕನ್ನರು ಮತ್ತು ಭಾರತ ಮತ್ತು ಆಸ್ಟ್ರೇಲಿಯಾದಿಂದ ಒಬ್ಬೊಬ್ಬ ಪ್ರಜೆಗಳು ಇದ್ದಾರೆ. ಸುಮಾರು 25,643 ಅಡಿ ಎತ್ತರದಲ್ಲಿ ಇರುವ ನಂದಾ ದೇವಿ ಶಿಖರವು ಭಾರತದ ಎರಡನೇ ಅತಿ ಎತ್ತರದ ಪರ್ವತ ಮತ್ತು ಜಗತ್ತಿನ 23 ನೇ ಅತಿ ಎತ್ತರದ ಪರ್ವತ ಶಿಖರ ಎಂಬ ಖ್ಯಾತಿ ಹೊಂದಿದೆ.