ನವದೆಹಲಿ: ಬಿಜೆಪಿ ಹಿರಿಯ ನಾಯಕ ಹಾಗೂ ಪಕ್ಷದ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಶೀಘ್ರದಲ್ಲೇ ಬಿಜೆಪಿ ಅಧ್ಯಕ್ಷ ಗಾದಿಗೇರಲಿದ್ದಾರೆ.
ಜೆಪಿ ನಡ್ಡಾ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಜ.20ರಂದು ಆಯ್ಕೆ ಆಗಲಿದ್ದಾರೆ. ಜೊತೆಗೆ ಪಕ್ಷದ ಚುನಾವಣಾ ಪ್ರಕ್ರಿಯೆ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ರಾಧಾ ಮೋಹನ ಸಿಂಗ್ ಅವರು ಶುಕ್ರವಾರ ಪ್ರಕಟಿಸಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಹುದ್ದೆ ಆಯ್ಕೆ ಸಂಬಂಧ ಜ.20ರಂದು ಚುನಾವಣೆ ನಡೆಯಲಿದೆ. ಅಂದು ಬೆಳಗ್ಗೆ 10 ರಿಂದ 12.30ರ ವರೆಗೆ ನಾಮಪತ್ರ ಸಲ್ಲಿಕೆ ಹಾಗೂ ಬಳಿಕ ಅಂದೇ ನಾಮಪತ್ರ ಪರಿಶೀಲನೆ, ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಪಕ್ಷದ ಚುನಾವಣಾ ಮುಖ್ಯಸ್ಥರು ಈ ಪ್ರಕ್ರಿಯೆಯನ್ನು ನಿರ್ವಹಿಸಲಿದ್ದಾರೆ ಎಂದು ಸಿಂಗ್ ಮಾಹಿತಿ ನೀಡಿದರು.
ಈಗಾಗಲೇ 21 ರಾಜ್ಯಗಳಲ್ಲಿ ರಾಷ್ಟ್ರೀಯ ಮಂಡಳಿಯ ಮುಖ್ಯಸ್ಥರು ಹಾಗೂ ಸದಸ್ಯರ ಆಯ್ಕೆ ನಡೆದಿದೆ. ಈಗ ಪಕ್ಷದ ರಾಷ್ಟ್ರಾಧ್ಯಕ್ಷರ ಆಯ್ಕೆ ನಡೆಯಲಿದ್ದು, ನಡ್ಡಾ ಅವರು ಅವಿರೋಧವಾಗಿ ಗದ್ದುಗೆ ಏರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕೇಂದ್ರ ಗೃಹ ಸಚಿವ ಸ್ಥಾನದ ಜೊತೆ ಪಕ್ಷದ ರಾಷ್ಟ್ರಾಧ್ಯಕ್ಷರಾಗಿಯೂ ಅಮಿತ್ ಶಾ ಈವರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಮಿತ್ ಶಾ ಅವಧಿಯಲ್ಲಿ ಬಿಜೆಪಿ ಹಲವು ಚುನಾವಣೆಗಳಲ್ಲಿ ಅಭೂತಪೂರ್ವ ಜಯ ಸಾಧಿಸಿದೆ.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಹಿರಿಯ ನಾಯಕರು ಜ.20 ರಂದು ಪಕ್ಷದ ಮುಖ್ಯ ಕಚೇರಿಯಲ್ಲಿ ಹಾಜರಿರಲಿದ್ದಾರೆ.