ದೆಹಲಿ: ದೇಶದಲ್ಲಿ ಮುಸ್ಲಿಮರು ಕೊರೊನಾ ವೈರಸ್ ಹರಡುತ್ತಿದ್ದಾರೆ ಎಂಬ ಆರೋಪಗಳು ಕೇವಲ ಗ್ರಹಿಕೆ ಅಷ್ಟೇ, ಅದು ವಾಸ್ತವವಲ್ಲ. ಮುಸ್ಲಿಮರು ಕೂಡ ನಮ್ಮ ಸಮಾಜದ ಒಂದು ಭಾಗವಾಗಿದ್ದಾರೆ ಎಂದು ಆರ್‌ಎಸ್‌ಎಸ್ ಹೇಳಿದೆ.
ಯಾರೋ ಕೆಲವರು ಮಾಡುವ ಕೆಲಸದಿಂದಾಗಿ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಈ ರೀತಿ ಮಾಡಿದರೆ ಜನರಲ್ಲಿ ತಪ್ಪು ಗ್ರಹಿಕೆ ಉಂಟಾಗುತ್ತದೆ. ಭಾರತದಲ್ಲಿ ಮುಸ್ಲಿಮರ ಕಲ್ಯಾಣಕ್ಕಾಗಿ ಸರ್ಕಾರ ಮತ್ತು ಸಮಾಜ ಸಾಕಷ್ಟು ಕಾಳಜಿ ಹೊಂದಿದೆ ಎಂದು ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ(ಸಹ ಸರಕಾರ್ಯವಾಹ್) ದತ್ತಾತ್ರೇಯ ಹೊಸಬಾಳೆ ರಾಷ್ಟ್ರೀಯ ಮಾಧ್ಯಮಗಳ ಸಂವಾದದ ವೇಳೆ ಹೇಳಿದ್ದಾರೆ.
ಕೆಲವರು ಮಾಡಿದ ತಪ್ಪಿಗೆ ಇಡೀ ಸಮಾಜವನ್ನು ದೂಷಿಸುವುದು ಸರಿಯಾದ ಕ್ರಮವಲ್ಲ ಎಂದು ಈಗಾಗಲೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕಳೆದ ವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲೇ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಯಾರನ್ನೂ ದೂಷಿಸುವುದು ಸರಿಯಾದ ಮನೋಭಾವವಲ್ಲ. ಈಗೇನಿದ್ದರೂ ಎಲ್ಲರೂ ಒಗ್ಗಟ್ಟಾಗಿ ವೈರಸ್ ವಿರುದ್ಧ ಹೋರಾಡಬೇಕು. ಯಾರಾದರೂ ಈ ರೀತಿಯ ಗ್ರಹಿಕೆಗಳನ್ನು ಸೃಷ್ಟಿಸುತ್ತಿದ್ದರೆ ಅದು ಸ್ವೀಕಾರರ್ಹವಲ್ಲ ಎಂದು ಮಾದ್ಯದವರ ಪ್ರಶ್ನೆಗೆ ಉತ್ತರಿಸಿದರು.
ಏನೆಂದರೆ ದುರದೃಷ್ಟಕರ ರೀತಿಯಲ್ಲಿ ಸಮಾಜದಲ್ಲಿ ಈರೀತಿಯ ತಪ್ಪು ಗ್ರಹಿಕೆ ಸೃಷ್ಟಿಯಾಗಿದೆ. ಇಂತಹ ದುರದೃಷ್ಟಕರ ಘಟನೆಗಳನ್ನು ಸಾಮಾನ್ಯೀಕರಿಸಲು ಹೋಗಬಾರದು ಎಂದ ಅವರು, ಭಾರತದಲ್ಲಿ ಮುಸ್ಲಿಮರ ಕಲ್ಯಾಣಕ್ಕಾಗಿ ಸರ್ಕಾರ ಹಾಗೂ ಸಮಾಜ ಸಾಕಷ್ಟು ಶ್ರಮಿಸುತ್ತಿದೆ. ಅಲ್ಲದೇ ಆರ್‌ಎಸ್‌ಎಸ್ 130 ಕೋಟಿ ಭಾರತೀಯರ ಬಗ್ಗೆ ಮಾತನಾಡುವುವಾಗ ಯಾವುದೇ ಧರ್ಮ ತಾರತಮ್ಯ ಮಾಡುವುದಿಲ್ಲ ಎಂದು ತಿಳಿಸಿದರು.
ಕೋವಿಡ್-19 ವಿರುದ್ಧ ಹೋರಾಡಲು ಸರ್ಕಾರದ ಜೊತೆ ಆರ್‌ಎಸ್‌ಎಸ್ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಪ್ರಶ್ನೆಗೆ, ಇದು ಕೇವಲ ಸರ್ಕಾರದ ಕೆಲಸವಲ್ಲ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಸಮಾಜ ಮತ್ತು ಸರ್ಕಾರ ಎರಡು ಒಟ್ಟಾಗಿ ನಿಂತು ಕಾರ್ಯನಿರ್ವಹಿಸುತ್ತದೆ ಎಂದರು.
2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅಸುರಕ್ಷಿತ ಭಾವನೆ ಹೊಂದಿರುವ ಮುಸ್ಲಿಮರನ್ನು ಸುರಕ್ಷಿತವಾಗಿಸಲು ಆರ್‌ಎಸ್‌ಎಸ್ ಏನು ಮಾಡುತ್ತಿದೆ ಎಂದು ಕೇಳಿದಾಗ, ಯಾವುದೇ ವಿಭಾಗದ ಬಗೆಗಿನ ಕಾಳಜಿಗೆ ಆರ್‌ಎಸ್‌ಎಸ್ ಸ್ವಾಗತಾರ್ಹ ಎಂದ ಅವರು, ಆದರೆ ಸಮಾಜದ ಒಂದು ಭಾಗವನ್ನು ಮಾತ್ರ ಏಕೆ ಹೈಲೈಟ್ ಮಾಡಲಾಗುತ್ತಿದೆ? ಎಂದು ಕೇಳಿದರು.
ಕೊರೊನಾ ಹರಡುವಲ್ಲಿ ಚೀನಾದ ಪಾತ್ರದ ಬಗ್ಗೆ ಕೇಳಿದಾಗ, ಈ ಬಗ್ಗೆ ಆರ್ಎಸ್ಎಸ್ನಂತಹ ಸಂಸ್ಥೆಗಳು ಅದು ಮಾನವ ನಿರ್ಮಿತವಾಗಿದೆಯೋ, ಅಲ್ಲವೋ ಎಂಬುದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಇಂತಹ ಜಾಗತಿಕ ಬಿಕ್ಕಟ್ಟಿನ ಬಗ್ಗೆ ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ಜವಾಬ್ದಾರಿವಹಿಸಿ, ತನಿಖೆ ನಡೆಸಿ ಅದರ ಬಗ್ಗೆ ತಿಳಿಸುತ್ತವೆ ಎಂದರು.
ಕೊರೊನಾದಿಂದಾಗಿ ಈಗಾಗಲೇ ಚೀನಾವನ್ನು ತೊರೆದಿರುವ ಕಂಪನಿಗಳನ್ನು ಆಕರ್ಷಿಸಲು ಭಾರತ ಹೇಗೆ ಸಜ್ಜಾಗಿದೆ ಎಂದು ಕೇಳಿದಾಗ, ಅಂತಹ ಕಂಪನಿಗಳನ್ನು ಆಕರ್ಷಿಸಲು ಭಾರತ ಸರ್ಕಾರ ಈಗಾಗಲೇ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದ ಅವರು, ಉತ್ಪಾದನಾ ಮತ್ತು ಕೃಷಿ ಕೇಂದ್ರವಾಗಿ ಭಾರತವು ತನ್ನ ಕಾಲ ಮೇಲೆ ನಿಲ್ಲಬೇಕು ಎಂದು ಒತ್ತಿ ಹೇಳಿದರು.
ಆಧುನಿಕ ಜಗತ್ತಿನಲ್ಲಿ, ಯಾವುದೇ ದೇಶವು ಹೊರಗಿನ ಪ್ರಪಂಚಕ್ಕೆ ಬಾಗಿಲು ಮುಚ್ಚಲು ಸಾಧ್ಯವಿಲ್ಲ. ಆದರೆ ನಮಗೆ ಬೇಕಾಗಿರುವುದು ಹೊಂದಾಣಿಕೆ ಮತ್ತು ಸಾರ್ವತ್ರಿಕತೆ. ಈ ದಿಕ್ಕಿನಲ್ಲಿಯೇ ಭಾರತದ ಮಾನವ ಸಂಪನ್ಮೂಲವು ಒಂದು ಪ್ರಯೋಜನವಾಗಿದೆ ಎಂದು ಹೇಳಿದರು.
ಸದ್ಯದ ಪರಿಸ್ಥಿಯಲ್ಲಿ ಕೊರೊನಾ ಪ್ರತಿಯೊಬ್ಬರನ್ನು ಶತ್ರುವಿನಂತೆ ಕಾಡುತ್ತಿದ್ದು, ನಾವೆಲ್ಲಾ ಮಾನವರು ಯಾವುದೇ ಭೇದ ಭಾವ ಮಾಡದೇ ಒಗ್ಗಟ್ಟಾಗಿ ಅದರ ವಿರುದ್ಧ ಹೋರಾಡ ಬೇಕು ಎಂದು ಹೇಳಿದರು.