ಲಖನೌ: ಲೋಕಸಭಾ ಚುನಾವಣೆ ಫಲಿತಾಂಶದ ದಿನ ಜನಿಸಿದೆ ಎನ್ನಲಾದ ಮಗುವಿಗೆ ಇಲ್ಲಿನ ಮುಸ್ಲಿಂ ಕುಟುಂಬ ನರೇಂದ್ರ ಮೋದಿ ಎಂದು ಹೆಸರಿಡಲು ನಿರ್ಧರಿಸಿತ್ತು. ತನ್ನ ಸಂಬಂಧಿಕರ ಒತ್ತಡಕ್ಕೆ ಮಣಿದು ಈಗ ಹೆಸರು ಬದಲಾಯಿಸಿದೆ.
ಮೋದಿ ಅವರ ವರ್ಚಸ್ಸಿನಿಂದ ಪ್ರೇರಿತವಾಗಿ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಮೆಹನಾಜ್ ಬೇಗಂ ತಮ್ಮ ಮಗುವಿಗೆ 'ಮೊಹಮ್ಮದ್ ಅಲ್ತಾಫ್ ಆಲಂ ಮೋದಿ' ಎಂದು ಮರು ನಾಮಕರಣ ಮಾಡಿದ್ದಾರೆ.
ಹಿಂದೂ ಹೆಸರಿಟ್ಟ ಕಾರಣ ಕೆಲವು ಸಂಬಂಧಿಕರು ನಾಮಕರಣ ಕಾರ್ಯಕ್ರಮಕ್ಕೆ ಬರಲು ಹಿಂಜರಿದಿದ್ದರು ಎನ್ನಲಾಗಿದೆ. ಹೀಗಾಗಿ, ಮಗು ದೊಡ್ಡವನಾದ ಮೇಲೆ ಆತನ ಹೆಸರಿನಿಂದ ಮುಜುಗರ ಉಂಟಾಗಬಾರದೆಂದು ಹೆಸರು ಬದಲಾಯಿಸಿದ್ದೇವೆ ಎಂದು ಬೇಗಂ ಸ್ಪಷ್ಟನೆ ನೀಡಿದ್ರು.
ಲೋಕಸಭಾ ಚುನಾವಣೆ ಫಲಿತಾಂಶದ ದಿನ ಮಗು ಜನಿಸಿತ್ತು ಎಂದು ಬೇಗಂ ಈ ಹಿಂದೆ ಹೇಳಿದ್ದರು. ಆದರೆ, ಸ್ಥಳೀಯ ಆಸ್ಪತ್ರೆಯ ವೈದ್ಯರು ಮಗು ಮೇ 12ರಂದೇ ಜನಿಸಿದೆ ಎಂದಿದ್ದಾರೆ.