ಮುಂಬೈ: ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ದಂಧೆ ಪ್ರಕರಣದಲ್ಲಿ ಮುಂಬೈ ಪೊಲೀಸರ ಅಪರಾಧ ವಿಭಾಗ 9ನೇ ಆರೋಪಿಯನ್ನು ಬಂಧಿಸಿದ್ದಾರೆ.
ಇಲ್ಲಿನ ಉಪನಗರ ಚಂಡಿವಾಲಿಯ ನಿವಾಸಿ ಹರೀಶ್ ಕಮಲಾಕರ್ ಪಾಟೀಲ್ (45) ಎಂಬಾತನನ್ನು ಅಪರಾಧ ವಿಭಾಗದ ಗುಪ್ತಚರ ಘಟಕ (ಸಿಐಯು) ಬಂಧಿಸಿದೆ. ಬಳಿಕ ಆತನನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 26ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಈ ಪ್ರಕರಣದಲ್ಲಿ ಪಾಟೀಲ್ ಕೆಲವು ಟಿವಿ ಚಾನೆಲ್ಗಳಿಂದ ಹಣ ಪಡೆದು ಟಿಆರ್‌ಪಿ ರೇಟಿಂಗ್ ಹೆಚ್ಚಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದ ಎನ್ನುವ ಆರೋಪವಿದೆ. ಅಲ್ಲದೆ ಮಾಧ್ಯಮವೊಂದನ್ನು ಮುನ್ನಡೆಸುತ್ತಿರುವ ಸದ್ಯ ತಲೆಮರೆಸಿಕೊಂಡಿರುವ ಅಭಿಷೇಕ್ ಕೊತ್ವಾಲೆ ಹಾಗೂ ಪಾಟೀಲ್ ನಡುವೆ ಕೆಲವು ಹಣಕಾಸಿನ ವ್ಯವಹಾರ ನಡೆದಿರುವುದು ತನಿಖೆಯಿಂದ ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಪ್ರರಕಣ ಬೆಳಕಿಗೆ ಬಂದಾಗ ಕೊತ್ವಾಲೆ ಪರಾರಿಯಾಗಲು ಪಾಟೀಲ್ ಸಹಾಯ ಮಾಡಿದ್ದ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಾಟೀಲ್ ಹೊಂದಿರುವ ಕಂಪನಿಯ ಅಕೌಂಟ್ಗಳನ್ನು ಕೆಲವು ಚಾನೆಲ್ಗಳಿಂದ ಹಣ ಸ್ವೀಕರಿಸಲು ಬಳಸಲಾಗಿದೆಯೆಂದು ಶಂಕಿಸಲಾಗಿದೆ. ಈ ಹಣವನ್ನು ಕೊತ್ವಾಲೆ ಈಗಾಗಲೇ ಬಂಧನವಾಗಿರುವ ಆರೋಪಿಗಳಿಗೆ ನೀಡಿ, ಟಿವಿ ವೀಕ್ಷಿಸುವ ಜನರಿಗೆ ಮುಟ್ಟಿಸುವಂತೆ ತಿಳಿಸುತ್ತಿದ್ದರು ಎನ್ನಲಾಗಿದೆ.
ರೇಟಿಂಗ್ ಏಜೆನ್ಸಿ ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಹನ್ಸಾ ರಿಸರ್ಚ್ ಗ್ರೂಪ್ ಮೂಲಕ ಪೊಲೀಸರಿಗೆ ದೂರು ನೀಡಿದಾಗ, ಕೆಲವು ಚಾನೆಲ್‌ಗಳು ಜಾಹೀರಾತುದಾರರಿಗೆ ಆಮಿಷವೊಡ್ಡಲು ಟಿಆರ್‌ಪಿ ಸಂಖ್ಯೆಯನ್ನು ಕುಚೋದ್ಯದಿಂದ ಬದಲಾವಣೆ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದ ಬಳಿಕ ನಕಲಿ ಟಿಆರ್‌ಪಿ ಹಗರಣ ಬೆಳಕಿಗೆ ಬಂದಿತ್ತು.