ಮುಂಬೈ: ಯೆಸ್ ಬ್ಯಾಂಕ್ ಹಗರಣ ಸಂಬಂಧ ಅರೆಸ್ಟ್ ಆಗಿದ್ದ ಡಿಹೆಚ್‌ಎಫ್‌ಎಲ್ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವನ್ ಸಹೋದರರ ಇಡಿ ಕಸ್ಟಡಿ ಅವಧಿಯನ್ನು ಮೇ 27ರ ವರೆಗೆ ವಿಸ್ತರಿಸಿ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಯೆಸ್ ಬ್ಯಾಂಕ್ನ ಸಹ ಸಂಸ್ಥಾಪಕ ಹಾಗೂ ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಣಾ ಕಪೂರ್ ವಿರುದ್ಧ ತನಿಖೆ ನಡೆಸಲು ವಾಧವನ್ ಸಹೋದರರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಬಂಧಿಸಲಾಗಿತ್ತು.
ಜಾರಿ ನಿರ್ದೇಶನಾಲಯದ ವಶದಲ್ಲಿದ್ದ ಇವರನ್ನು ಶುಕ್ರವಾರ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ ಹಾಗೂ ಇನ್ನೂ ಕೆಲವು ದೊಡ್ಡ ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ ಎಂದು ಇಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್, ಇವರ ಇಡಿ ಕಸ್ಟಡಿ ಅವಧಿಯನ್ನು ವಿಸ್ತರಿಸಿದೆ.
ಕಳೆದ ಏಪ್ರಿಲ್ನಲ್ಲಿ ಲಾಕ್ಡೌನ್ ಸಮಯದಲ್ಲೂ ಕಪಿಲ್ ಮತ್ತು ಧೀರಜ್ ಹಾಗೂ ಅವರ ಕುಟುಂಬದ ಸದಸ್ಯರು ಮಹಾರಾಷ್ಟ್ರದ ಲೋನವಾಲಾದಿಂದ ಮಹಾಬಲೇಶ್ವರಕ್ಕೆ ಪ್ರಯಾಣಿಸಿದ್ದರು. ಈ ಸಂಬಂಧ ಪ್ರಯಾಣಕ್ಕೆ ಬಳಸಿದ್ದ ಐದು ಐಷಾರಾಮಿ ವಾಹನಗಳನ್ನು ಇಡಿ ವಶ ಪಡೆದುಕೊಂಡಿತ್ತು.