ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಖಾಸಗಿ ರಂಗದ ಯೆಸ್ ಬ್ಯಾಂಕ್ ಗ್ರಾಹಕರಿಗೆ ದಿಢೀರ್ ಶಾಕ್ ನೀಡಿದ್ದು, ಇನ್ಮುಂದೆ ಈ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಗ್ರಾಹಕರು 50 ಸಾವಿರಕ್ಕಿಂತಲೂ ಅಧಿಕ ಹಣ ವಿತ್ ಡ್ರಾ ಮಾಡದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ಹೇರಿದೆ.
ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಂತೆ ಬ್ಯಾಂಕ್ನ ಆಡಳಿತವನ್ನ ತನ್ನ ಕೈಗೆ ತೆಗೆದುಕೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣದಿಂದ ಹಣ ವಾಪಸ್ ಪಡೆಯಲು ಕೆಲ ನಿಬಂಧನೆ ಹೇರಿದ್ದು, ಇದರಿಂದ ಗ್ರಾಹಕರು ಯೆಸ್ ಬ್ಯಾಂಕ್ ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಹಣ ವಿತ್ ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಯೆಸ್ ಬ್ಯಾಂಕ್ ಎಟಿಎಂಗಳ ಮುಂದೆ ’ನೋ ಮನಿ’ ಎಂಬ ಬೋರ್ಡ್ಗಳು ರಾರಾಜಿಸುತ್ತಿವೆ.
ಬ್ಯಾಂಕ್ನ ಆರ್ಥಿಕ ಸ್ಥಿತಿ ಗಂಭೀರವಾಗಿ ಕುಸಿದಿರುವ ಕಾರಣ ಈಗಾಗಲೇ ಆಡಳಿತ ಮಂಡಳಿ ವಜಾಗೊಳಿಸಲು ಆರ್ಬಿಐ ಕ್ರಮ ಕೈಗೊಂಡಿದೆ. ಇದರ ಜತೆಗೆ ಯೆಸ್ ಬ್ಯಾಂಕ್ನ ಎಲ್ಲ ಕಾರ್ಯ ಚಟುವಟಿಕೆಗಳ ಮೇಲೆ ಆರ್ಬಿಐ ತಡೆಯಾಜ್ಞೆ ನೀಡಿದ್ದು, 2020ರ ಏಪ್ರಿಲ್ 3ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಇನ್ನು ಆನ್ಲೈನ್ ಮೂಲಕ ವ್ಯವಹಾರ ನಡೆಸುತ್ತಿರುವ ಯೆಸ್ ಬ್ಯಾಂಕ್ನ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದು, ಸೈಟ್ ಓಪನ್ ಆಗುತ್ತಿಲ್ಲ.