ನವದೆಹಲಿ: ಮಧ್ಯಪ್ರದೇಶದ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 355 ಅಭ್ಯರ್ಥಿಗಳಲ್ಲಿ 63 ಅಭ್ಯರ್ಥಿಗಳ (ಶೇ.18 ರಷ್ಟು) ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಮಾಡಿದೆ.
ಚುನಾವಣೆ ಕಣಕ್ಕಿಳಿಯುತ್ತಿರುವ ಕಾಂಗ್ರೆಸ್ನ 28 ಅಭ್ಯರ್ಥಿಗಳ ಪೈಕಿ 14, ಬಿಜೆಪಿಯ 28 ಅಭ್ಯರ್ಥಿಗಳ ಪೈಕಿ 12, ಬಿಎಸ್ಪಿಯ 28 ಅಭ್ಯರ್ಥಿಗಳ ಪೈಕಿ 8, ಸಮಾಜವಾದಿ ಪಕ್ಷ (ಎಸ್ಪಿ)ದ 14 ಅಭ್ಯರ್ಥಿಗಳ ಪೈಕಿ 4, 178 ಸ್ವತಂತ್ರ ಅಭ್ಯರ್ಥಿಗಳ ಪೈಕಿ 16 ಅಭ್ಯರ್ಥಿಗಳು ನಾಮಪತ್ರದ ಜೊತೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಕೇಸ್ಗಳು ದಾಖಲಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಇವರದಲ್ಲಿ ಶೇ.11 ರಷ್ಟು ಅಂದರೆ 39 ಅಭ್ಯರ್ಥಿಗಳ ವಿರುದ್ಧ ಗಂಭೀರ ಪ್ರಕರಣಗಳಿವೆ. ಇವರದ್ದು ಐದು ವರ್ಷಗಳ ಜೈಲು ಶಿಕ್ಷೆಯೊಂದಿಗೆ ಜಾಮೀನುರಹಿತ ಅಪರಾಧಗಳಾಗಿವೆ. ಒಬ್ಬ ಅಭ್ಯರ್ಥಿಯು ತನ್ನ ವಿರುದ್ಧ ಕೊಲೆ (ಐಪಿಸಿ ಸೆಕ್ಷನ್ - 302) ಪ್ರಕರಣವನ್ನು ಘೋಷಿಸಿದ್ದು, ಏಳು ಅಭ್ಯರ್ಥಿಗಳು ಕೊಲೆಗೆ ಯತ್ನ (ಐಪಿಸಿ ಸೆಕ್ಷನ್ - 307)ಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂದು ಎಡಿಆರ್ ತಿಳಿಸಿದೆ.
ಮಧ್ಯಪ್ರದೇಶದ 28 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, 10 ರೆಡ್ ಅಲರ್ಟ್ ಕ್ಷೇತ್ರಗಳಾಗಿವೆ. ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾರಣಗಳನ್ನು ನೀಡುವಂತೆ ಫೆಬ್ರವರಿಯಲ್ಲೇ ಸುಪ್ರೀಂಕೋರ್ಟ್ ರಾಜಕೀಯ ಪಕ್ಷಗಳಿಗೆ ಸೂಚಿಸಿತ್ತು. ಆದರೆ ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಯಾವುದೇ ರಾಜಕೀಯ ಪಕ್ಷಗಳು ಪಾಲಿಸದೇ ಟಿಕೆಟ್ ನೀಡಿವೆ.