ಗುವಾಹತಿ(ಅಸ್ಸೋಂ): ವಿದ್ಯಾರ್ಥಿಗಳು ಇಲ್ಲದಿದ್ದರೂ ಮೂರು ಲಕ್ಷಕ್ಕೂ ಅಧಿಕ ಮಕ್ಕಳಿರುವಂತೆ ಸುಳ್ಳು ದಾಖಲಾತಿ ತೋರಿಸಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಅಸ್ಸೋಂನ ಸರ್ಕಾರಿ ಶಾಲೆಗಳನ್ನು ಪತ್ತೆ ಹಚ್ಚಲಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅಸ್ಸೋಂ ಮುಖ್ಯಮಂತ್ರಿ ಸರ್ವಾನಂದ ಸೋನೋವಾಲ್ ಗಂಭೀರ ಆರೋಪ ಮಾಡಿದ್ದಾರೆ.
2016-17ರ ಶೈಕ್ಷಣಿಕ ಸಾಲಿನಲ್ಲಿ ಒಂದರಿಂದ 12 ನೇ ತರಗತಿಯಲ್ಲಿ 49,82,180 ಇದ್ದ ಮಕ್ಕಳ ಸಂಖ್ಯೆ 2018-19 ರ ದಾಖಲಾತಿಯಲ್ಲಿ 46,69,970 ಇದೆ. ಅಸ್ತಿತ್ವದಲ್ಲಿಲ್ಲದ 3 ಲಕ್ಷದ 12 ಸಾವಿರ ಮಕ್ಕಳ ನಕಲಿ ದಾಖಲಾತಿಯಡಿ ಪಠ್ಯ ಪುಸ್ತಕ, ಬಿಸಿಯೂಟ, ಸಮವಸ್ತ್ರದ ಹೆಸರಲ್ಲಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಇನ್ನು, ಸ್ವಚ್ಛತೆ, ನೈರ್ಮಲ್ಯವನ್ನು ಕಾಪಾಡಿಕೊಳ್ಳಲು, ವಿವಿಧ ಚಟುವಟಿಕೆಗಳಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಪ್ರೇರೇಪಿಸುವ, ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳ ಸಮಗ್ರ ಅಭಿವೃದ್ಧಿಗೆ ದುಡಿಯುವ ಶಿಕ್ಷಕರನ್ನು ಗುರುತಿಸಿ 'ಮುಖ್ಯಮಂತ್ರಿಗಳ ವಿಶೇಷ ಶಿಕ್ಷಕರ ಪ್ರಶಸ್ತಿ'ಯನ್ನು ನೀಡಲಾಗುವುದು ಎಂದು ಸಿಎಂ ಸೋನೊವಾಲ್ ಘೋಷಿಸಿದ್ದಾರೆ.