ಇಂದೋರ್ (ಮಧ್ಯಪ್ರದೇಶ): 2020 ರ ಮಾರ್ಚ್‌ನಲ್ಲಿ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗುವಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಹೇಳಿಕೆ ನೀಡಿದ್ದಾರೆ.
ಇಂದೋರ್‌ನಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಕಿಸಾನ್ ಸಮ್ಮೇಳನದಲ್ಲಿ ಮಾತನಾಡಿದ ಕೈಲಾಶ್ ವಿಜಯವರ್ಗಿಯಾ "ಯಾರಿಗೂ ಹೇಳಬೇಡಿ, ನಾನು ಇದನ್ನು ಈವರೆಗೆ ಯಾರಿಗೂ ಹೇಳಿಲ್ಲ. ಕಮಲ್ ನಾಥ್ ಸರ್ಕಾರವನ್ನು ಕೆಳಗಿಳಿಸುವಲ್ಲಿ ಯಾರಾದರೂ ಪ್ರಮುಖ ಪಾತ್ರ ವಹಿಸಿದ್ದರೆ ಅದು ನರೇಂದ್ರ ಮೋದಿ ಹೊರತು ಧರ್ಮೇಂದ್ರ ಪ್ರಧಾನ್ ಅಲ್ಲ" ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಹಾಜರಿದ್ದರು. ವಿಜಯವರ್ಗಿಯಾ ಹೀಗೆ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ ಮೂಡಿಸಿದೆ.
ಓದಿ: ಜೆ ಪಿ ನಡ್ಡಾ ಬೆಂಗಾವಲು ವಾಹನದ ಮೇಲೆ ದಾಳಿ ಪ್ರಕರಣ : 7 ಆರೋಪಿಗಳನ್ನ ಬಂಧಿಸಿದ ಬಂಗಾಳ ಪೊಲೀಸರು
ವಿಜಯವರ್ಗಿಯಾ ಮಾತನಾಡಿರುವ ವಿಡಿಯೋವನ್ನು ಶೇರ್ ಮಾಡಿ ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ, "ಸಂವಿಧಾನಾತ್ಮಕವಾಗಿ ಚುನಾಯಿತವಾದ ಸರ್ಕಾರಗಳನ್ನು ಅಸಾಂವಿಧಾನಿಕ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಳಗಿಳಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.