ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರನ್ನು ಭೇಟಿಯಾಗಿದ್ದು, ದೇಶದ ಭದ್ರತೆ ಮತ್ತು ರಕ್ಷಣೆ ಸೇರಿದಂತೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಮಹಿಂದಾ ರಾಜಪಕ್ಸೆ, ಶ್ರೀಲಂಕಾ ಅಧ್ಯಕ್ಷ ಗೋತಬಯಾ ರಾಜಪಕ್ಸೆ ಅವರ ಸಹೋದರರಾಗಿದ್ದು, ಕಳೆದ ವರ್ಷ ನವೆಂಬರ್‌ನಲ್ಲಿ ದ್ವೀಪ ರಾಷ್ಟ್ರದ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದ್ದು, ದೇಶದಲ್ಲಿ 5 ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ.
ಮಹಿಂದಾ ರಾಜಪಕ್ಸೆ 2005-2015ರವರೆಗೆ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ದಕ್ಷಿಣ ಏಷ್ಯಾದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಯಕರಲ್ಲಿ ಒಬ್ಬರಾಗಿದ್ದಾರೆ. ನಂತರ 2018 ರಲ್ಲಿ ಅಲ್ಪಾವಧಿ ಸಮಯಕ್ಕೆ ಪ್ರಧಾನಿಯಾಗಿದ್ದರು. 2005ರಿಂದ 2015ರ ವೇಳೆಗೆ ಅಧ್ಯಕ್ಷರಾದ ಸಮಯದಲ್ಲಿ ಚೀನಾ ದೇಶವು ಶ್ರೀಲಂಕಾದಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿ ಭಾರತದಲ್ಲಿ ಕಳವಳವನ್ನು ಉಂಟುಮಾಡುವಂತೆ ಮಾಡಿತ್ತು.
ಕಳೆದ ನಾಲ್ಕು ವರ್ಷಗಳಿಂದ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದು, ಅಧ್ಯಕ್ಷ ಗೋತಬಯಾ ರಾಜಪಕ್ಸೆ ಉನ್ನತಾಧಿಕಾರ ವಹಿಸಿಕೊಂಡ ನಂತರ ನವೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಅದಲ್ದದೇ ಈ ಹಿಂದೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಸಹ ಶ್ರೀಲಂಕಾ ಪ್ರಧಾನಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಪ್ರಧಾನಿ ಭೇಟಿ ನಂತರ ರಾಜಪಕ್ಸೆ ಅವರು ವಾರಣಾಸಿ, ಸಾರನಾಥ್, ಬೋಧಗಯಾ ಮತ್ತು ತಿರುಪತಿಗೆ ಭೇಟಿ ನೀಡಲಿದ್ದಾರೆ.