ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿರುವ ಮೀಸಲಾತಿಯನ್ನು ಮುಂದುವರೆಸಲು ಬೇಕಾಗಿರುವ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಪ್ರಸ್ತಾಪಿಸಲು ಸಜ್ಜಾಗಿದೆ.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಸೋಮವಾರ ಲೋಕಸಭೆಯಲ್ಲಿ ಸಂವಿಧಾನದ 126 ನೇ ತಿದ್ದುಪಡಿ ಮಸೂದೆ-2019 ಅನ್ನು ಪ್ರಸ್ತಾಪಿಸಲಿದ್ದು, ಇದು ಎಸ್ಸಿ-ಎಸ್ಟಿ ವರ್ಗದವರಿಗಿರುವ ಮೀಸಲಾತಿಯನ್ನು ಇನ್ನೂ ಮುಂದಿನ ಹತ್ತು ವರ್ಷಗಳವರೆಗೆ ವಿಸ್ತರಿಸಲು ಬೇಕಾಗಿರುವ ಸಂವಿಧಾನದ 334 ನೇ ವಿಧಿಯ ತಿದ್ದುಪಡಿ ವಿಚಾರವನ್ನು ಎತ್ತಿಹಿಡಿಯಲಿದೆ.
ಇನ್ನೊಂದು ಕುತೂಹಲಕಾರಿ ವಿಷಯವೆಂದರೆ, ಈ ಪ್ರಸ್ತಾವಿತ ತಿದ್ದುಪಡಿಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಆಂಗ್ಲೋ ಭಾರತೀಯ ಸಮುದಾಯಕ್ಕೆ ಒದಗಿಸಲಾದ ಮೀಸಲಾತಿಯನ್ನು ಕಡಿಮೆ ಮಾಡಲಿದೆ.
ಕಳೆದ 70 ವರ್ಷಗಳಲ್ಲಿ ಎಸ್ಸಿ-ಎಸ್ಟಿ ವರ್ಗದವರು ಸಾಕಷ್ಟು ಪ್ರಗತಿ ಸಾಧಿಸಿದ್ದರೂ, ಸಂವಿಧಾನ ರಚನಾ ಸಭೆಯಲ್ಲಿ ಹೇಳಲಾದ ಮೀಸಲಾತಿಗೆ ಸಂಬಂಧಿಸಿದ ನಿಬಂಧನೆಗಳು ಇನ್ನೂ ಅಸ್ತಿತ್ವದಲ್ಲಿಲ್ಲ. ಹೀಗಾಗಿ ಸಂವಿಧಾನದ ಸ್ಥಾಪಕ ಪಿತಾಮಹರ ಕಲ್ಪನೆಯಂತೆ ಸಂವಿಧಾನದ ಅಂತರ್ಗತ ಪಾತ್ರವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಮೀಸಲಾತಿಯನ್ನು ಇನ್ನೂ 10 ವರ್ಷಗಳವರೆಗೆ, ಅಂದರೆ 2030ರ ಜನವರಿ 20ರ ವರೆಗೆ ಮುಂದುವರಿಸಲು ಉದ್ದೇಶಿಸಲಾಗಿದೆ ಎಂದು ಪ್ರಸ್ತಾವಿತ ಮಸೂದೆಯಲ್ಲಿ ತಿಳಿಸಲಾಗಿದೆ.
ಡಿ. 3 ರಂದು ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಮತ್ತು ಪಕ್ಷದ ಮುಖ್ಯಸ್ಥ ಅಮಿತ್ ಶಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕಾನೂನು ಸಚಿವ ರವಿಶಂಕರ್ ಪ್ರಸಾದ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್ ಇವರೊಂದಿಗೆ ನಡೆದ ಸಭೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ 'ಮೀಸಲಾತಿ ವಿರೋಧಿ' ಎಂದು ಬಿಂಬಿಸಲಾಗುತ್ತಿರುವುದರಿಂದ ಕೇಂದ್ರ ಸರ್ಕಾರದ ಈ ಕ್ರಮ ಮಹತ್ವದ್ದಾಗಿದೆ.