ಮುಂಬೈ: ಅತ್ಯಾಚಾರಕ್ಕೀಡಾದ ಬಾಲಕಿ ಗರ್ಭಪಾತ ಮಾಡಿಸಿಕೊಳ್ಳಲಿಲ್ಲ ಎಂದು ಮಹಾರಾಷ್ಟ್ರದ ಪಂಚಾಯ್ತಿಯೊಂದು ಆಕೆಯ ಕುಟುಂಬಕ್ಕೆ ಬಹಿಷ್ಕಾರ ಹಾಕಲು ಯತ್ನಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಧುಲಿಯಾ ಜಿಲ್ಲೆಯ ಗ್ರಾಮವೊಂದರ ಪಂಚಾಯ್ತಿ ಸದಸ್ಯನ ಸಂಬಂಧಿಕನೇ ಮಗಳ ಮೇಲೆ ಅತ್ಯಾಚಾರ ಮಾಡಿ, ಗರ್ಭಪಾತ ಮಾಡಿಸಿಕೊಳ್ಳುವಂತೆ ಬಲವಂತ ಮಾಡುತ್ತಿದ್ದಾರೆ. ಇದಕ್ಕೆ ಒಪ್ಪದ ಕಾರಣ, ನಮ್ಮನ್ನು ಗ್ರಾಮದಿಂದಲೇ ಬಹಿಷ್ಕಾರ ಹಾಕಲು ಮುಂದಾಗಿದ್ದಾರೆ ಎಂದು ಬಾಲಕಿ ಕುಟುಂಬ ಹೇಳಿಕೊಂಡಿದೆ.
ಗರ್ಭಪಾತಕ್ಕೆ ಒಪ್ಪದ ಬಾಲಕಿ ಮೇ 30ರಂದು ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ಬಹಿಷ್ಕಾರದ ಒತ್ತಾಯ ಹೆಚ್ಚಾಗಿದೆ ಎಂದು ಆರೋಪಿಸಲಾಗಿದೆ.
ಗುಜರಾತ್ನಲ್ಲಿದ್ದ ಪೋಷಕರು ಹಲವು ತಿಂಗಳ ನಂತರ ಮನೆಗ ಬಂದಾಗ ಮಗಳು ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಬಾಲಕಿಯ ತಂದೆ ತಮಗೆ ನ್ಯಾಯ ಕೊಡಿಸಿ ಎಂದು ಪಂಚಾಯ್ತಿ ಮೊರೆ ಹೋದಾಗ, ಸಹಾಯ ಮಾಡುವ ಬದಲು, ಗರ್ಭಪಾತ ಮಾಡಿಸಿಕೊಳ್ಳವಂತೆ ಹಿಂಸೆ ನೀಡಲಾಯ್ತು ಎಂದು ತಿಳಿದುಬಂದಿದೆ.
ಆರಂಭದಲ್ಲಿ ಪೊಲೀಸರು ಸಹ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಸಾಮಾಜಿಕ ಹೋರಾಟಗಾರ ನವಲ್ ಠಾಕ್ರೆ ನೆರವು ನೀಡಿದ್ದರಿಂದ ಮೇ 19ರಂದು ಪ್ರಕರಣ ದಾಖಲಿಸಿಕೊಂಡರು. ಆನಂತರ ಹಿಂಸೆ ಮುಂದುವರೆಸಿದ ಪಂಚಾಯ್ತಿಯವರು ದೂರು ವಾಪಸ್ ಪಡೆಯುವಂತೆ ಒತ್ತಾಯಿಸಿದರು. 11 ಸಾವಿರ ದಂಡವನ್ನೂ ವಿಧಿಸಿದರು. ಮಗಳು 15 ವರ್ಷದವಳಾದ್ದರಿಂದ ಗರ್ಭಪಾತ ಮಾಡಿಸಲಾಗದು ಎಂದರೂ ಕಿರುಕುಳ ನೀಡುತ್ತಲೇ ಇದ್ದರು. ಕೊಲೆ ಬೆದರಿಕೆ ಕೂಡಾ ಬಂದವು ಎಂದು ಬಾಲಕಿ ತಂದೆ ನೋವು ತೋಡಿಕೊಂಡಿದ್ದಾರೆ.
ನೀರು ಹಿಡಿಯಲೂ ಬಿಡದೆ, ಇದೀಗ ಊರಿನಿಂದಲೇ ಹೊರಹಾಕಲು ಮುಂದಾಗಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ.