ಹೈದರಾಬಾದ್ (ತೆಲಂಗಾಣ): ನಗರದ ಎಂಜಿ ಬಸ್ ನಿಲ್ದಾಣದಲ್ಲಿ ಅಪಹರಣಕ್ಕೊಳಗಾದ ಮೂರು ವರ್ಷದ ಹೆಣ್ಣು ಮಗುವನ್ನು 20 ಗಂಟೆಗಳ ಒಳಗಾಗಿ ರಕ್ಷಿಸಲಾಗಿದೆ. ಮಗುವನ್ನು ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಅಂಜನಿ ಕುಮಾರ್, ನವೆಂಬರ್ 14ರಂದು ಶಿಲ್ಪವೇಲಿ ಸೆಂಟ್ರಲ್ ಪಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ, ಮೂಲತಃ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆ, ಅಡೋನಿ ಮಂಡಲದ ನಾಗಲಪುರಂ ಗ್ರಾಮದವರಾದ ಸಂಗತಿ ರಾಮಂಜನೇಲು ಎಂಬುವರ ಪತ್ನಿ ಸಂಗತಿ ಜಯಲಕ್ಷ್ಮಿ ಎಂಬುವರಿಂದ ಮಗು ಕಾಣೆಯಾದ ಬಗ್ಗೆ ದೂರು ಬಂದಿತ್ತು.
ದೂರಿನಲ್ಲಿ ತಿಳಿಸಿರುವಂತೆ, ಜಯಲಕ್ಷ್ಮಿಯವರು ಸೋದರ ಸಂಬಂಧಿ ಲಕ್ಷ್ಮಿ ಮತ್ತು ಅವರ ಪತಿ ನಾಗಾರ್ಜುನ ಮತ್ತು ಅವರ ಇಬ್ಬರು ಮಕ್ಕಳೊಂದಿಗೆ ಬಳ್ಳಾರಿಯ ಸಂಬಂಧಿಕರ ಮನೆಗೆ ತೆರಳಲು ಎಂಜಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ರಾತ್ರಿ ಸುಮಾರು 9:30ರ ಹೊತ್ತಿಗೆ ಬಸ್ ಬಂದಿತ್ತು. ಆ ವೇಳೆ ನಾಗಾರ್ಜುನ ಬಳ್ಳಾರಿಗೆ ಬರಲ್ಲ ಎಂದು ಹಿಂಜರಿದಿದ್ದ. ಆತನೊಂದಿಗೆ, ಆತನ ಪತ್ನಿ, ಮಕ್ಕಳು ಕೂಡ ಬಸ್ನಿಂದ ಕೆಳಗಿಳಿದಿದ್ದರು. ಈ ವೇಳೆ ಜಯಲಕ್ಷ್ಮಿಯವರು ನಾಗಾರ್ಜುನನನ್ನು ಮನವೊಲಿಸಲು ಮಗಳನ್ನು ಬಸ್ನಲ್ಲಿ ಬಿಟ್ಟು ಕೆಳಗಿಳಿದಿದ್ದರು. ಹತ್ತು ನಿಮಿಷದ ಬಳಿಕ ಮತ್ತೆ ಬಸ್ ಹತ್ತಿ ನೋಡಿದರೆ ಮೂರು ವರ್ಷದ ಮಗು ಕಾಣೆಯಾಗಿತ್ತು.
ಈ ವೇಳೆ ಗಾಬರಿಗೊಂಡ ಜಯಲಕ್ಷ್ಮಿ, ಮಗಳಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಮಗುವಿನ ಬಗ್ಗೆ ಸಹ ಪ್ರಯಾಣಿಕರಲ್ಲಿ ವಿಚಾರಿಸಿದಾಗ, ಕೆಂಪು ಬಣ್ಣದ ಸೀರೆಯುಟ್ಟ 20ರಿಂದ 25 ವಯಸ್ಸಿನ ಮಹಿಳೆ ಮತ್ತು ನೀಲಿ ಬಣ್ಣದ ಶರ್ಟ್ ಪ್ಯಾಂಟ್ ಧರಿಸಿದ್ದ ಪುರುಷ ಮಗುವನ್ನು ಕರೆದುಕೊಂಡು ಹೋಗಿರುವುದಾಗಿ ಮಾಹಿತಿ ನೀಡಿದ್ದಾರೆ.
ದೂರು ಸ್ವೀಕರಿಸಿದ ಅಪ್ಜಲ್ಗಂಜ್ ಠಾಣೆ ಪೊಲೀಸರು, ವಿಳಂಬ ಮಾಡದೆ ತನಿಖೆ ಆರಂಭಿಸಿದ್ದರು. ಪೂರ್ವ ವಲಯ ಹೆಚ್ಚುವರಿ ಡಿಸಿಪಿ ಕೆ.ಮುರಳೀಧರ್, ಮಗುವಿನ ಪತ್ತೆಗಾಗಿ 7 ತಂಡಗಳನ್ನು ರಚಿಸಿದ್ದರು. ಈ ತಂಡಗಳು ತೀವ್ರ ಹುಡುಕಾಟ ನಡೆಸಿ ಅಪಹರಣಕ್ಕೊಳಗಾದ ಮಗುವನ್ನು 20 ಗಂಟೆಯೊಳಗೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಮಗುವನ್ನು ಮೆಹಬೂಬ್ ನಗರ ಜಿಲ್ಲೆ ವೀಪಂಗಂಡ್ಲ ಮಂಡಲ ಸಂಗಿನೈನಲ್ಲೆ ಗ್ರಾಮದ ದಂಪತಿ ಅಪಹರಿಸಿದ್ದರು. ಕಳೆದ ಆರು ವರ್ಷಗಳ ಹಿಂದೆ ಮದುವೆಯಾಗಿದ್ದ ಇವರಿಗೆ ಮಕ್ಕಳಾಗಿರಲಿಲ್ಲ. ಗ್ರಾಮದಲ್ಲಿ ಕೆಲಸವಿಲ್ಲದ ಕಾರಣ ಗಂಡ-ಹೆಂಡತಿ ಇಬ್ಬರೂ ಜಗಿತ್ಯಾಲ್ ಜಿಲ್ಲೆಯ ದೇಶಪೇಟೆ ಗ್ರಾಮಕ್ಕೆ ಕೆಲಸಕ್ಕೆ ಹೋಗಿದ್ದರು. ಅಲ್ಲಿ ತಿಂಗಳಿಗೆ 6 ಸಾವಿರ ರೂ. ಸಂಬಳಕ್ಕೆ ಕಾರ್ಮಿಕರಾಗಿ ದುಡಿಯುತ್ತಿದ್ದರು.
ನವೆಂಬರ್ 14ರಂದು ಮಧ್ಯಾಹ್ನ ತಮ್ಮ ಊರಿಗೆ ತೆರಳಲು ದಂಪತಿ ಜಗತ್ಯಾಲ್ನಿಂದ ಎಂಜಿ ಬಸ್ ನಿಲ್ದಾಣಕ್ಕೆ ಬಂದು ಮೆಹಬೂಬ್ ನಗರ ಬಸ್ಗಾಗಿ ಕಾಯುತ್ತಿದ್ದರು. ಈ ವೇಳೆ ಬಸ್ನಲ್ಲಿ ಮಗು ಒಂದೇ ಕೂತಿರುವುದು ಗಮನಿಸಿ ಅಪಹರಿಸಿದ್ದರು. ಬಳಿಕ ಬಸ್ ನಿಲ್ದಾಣದಿಂದ ಹೊರ ಬಂದು ಅಲ್ಲಿಂದ ನಗರದ ದಬೀರ್ಪುರಕ್ಕೆ ತೆರಳಿ ರಾತ್ರಿ ಕಳೆದಿದ್ದರು.
ಮರುದಿನ ಬೆಳಗ್ಗೆ 6 ಗಂಟೆಯ ಹೊತ್ತಿಗೆ ಅಪಹರಿಸಿದ ಮಗುವಿನೊಂದಿಗೆ ಪುರಾಣಪೂಲ್ ಬಳಿ ಮೆಹಬೂಬ್ ನಗರ ಬಸ್ ಹತ್ತಿದ ದಂಪತಿ, 8 ಗಂಟೆಯ ಹೊತ್ತಿಗೆ ಮೆಹಬೂಬ್ ನಗರ ತಲುಪಿದ್ದರು. ಬಳಿಕ ಅಲ್ಲಿಂದ ರೈಲ್ವೆ ನಿಲ್ದಾಣಕ್ಕೆ ಹೋಗಿ ಪೊಲೀಸರ ಭಯದಿಂದ ಇಡೀ ದಿನ ಅಲ್ಲೇ ಕಳೆದಿದ್ದರು ಎಂದು ನಗರ ಪೊಲೀಸ್ ಅಯುಕ್ತರು ಮಾಹಿತಿ ನೀಡಿದ್ದಾರೆ.