ಭುವನೇಶ್ವರ: ಲಾಕ್‌ಡೌನ್ ಅವಧಿಯಲ್ಲಿ ಒಡಿಶಾದಲ್ಲಿ ಬಾಲಕಿಯೊಬ್ಬಳ ಮೇಲೆ ಏಳು ಜನ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 30ರಂದು ಇಲ್ಲಿನ ಮಹಿಲಾ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿ ದೂರು ನೀಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಉಮಾಶಂಕರ್ ದಾಸ್ ಮಾಹಿತಿ ನೀಡಿದ್ದಾರೆ.
"ಮಹಿಳೆಯೊಬ್ಬರು ತನ್ನ ಅಪ್ರಾಪ್ತ ಬಾಲಕಿ ಮಾರ್ಚ್ ಮತ್ತು ಏಪ್ರಿಲ್ ನಡುವೆ ಮತ್ತೆ ಮತ್ತೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ಆರೋಪಿಸಿ ಮಹಿಳಾ ಪೊಲೀಸರಿಗೆ ಆಗಸ್ಟ್ 30ರಂದು ದೂರು ನೀಡಿದ್ದರು. ಆ ಆಧಾರದ ಮೇಲೆ ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಡಿಸಿಪಿ ಹೇಳಿದ್ದಾರೆ.
ದೂರಿನ ಪ್ರಕಾರ, ಅಪ್ರಾಪ್ತ ಬಾಲಕಿ ತನ್ನ ಕುಟುಂಬದೊಂದಿಗೆ ಇನ್ಫೋಸಿಟಿ ಪೊಲೀಸ್ ಠಾಣಾ ಪ್ರದೇಶದಲ್ಲಿ ವಾಸಿಸುತ್ತಿದ್ದಾಳೆ.
ಎರಡು ತಿಂಗಳ ಹಿಂದೆ ಭುವನೇಶ್ವರದಲ್ಲಿ ಕೋವಿಡ್-19 ಲಾಕ್‌ಡೌನ್ ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಸೇರಿದಂತೆ ಏಳು ಮಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿಯನ್ನು ಏಕಾಂಗಿಯಾಗಿ ಕಂಡಾಗ ಆರೋಪಿಗಳು ಪ್ರತ್ಯೇಕ ಪ್ರದೇಶದಲ್ಲಿ ಗನ್ ತೋರಿಸಿ ಅತ್ಯಾಚಾರ ನಡೆಸಿದ್ದಾರೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.