ಭದೋಹಿ (ಉತ್ತರ ಪ್ರದೇಶ): ಹಥ್ರಾಸ್ ಅತ್ಯಾಚಾರ ಘಟನೆಗೆ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಸಮಯದಲ್ಲೇ ಉತ್ತರ ಪ್ರದೇಶದ ಭದೋಹಿಯಲ್ಲಿ 14 ವರ್ಷದ ಬಾಲಕಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಬಾಲಕಿಯನ್ನು ಕೊಲೆ ಮಾಡುವ ಮೊದಲು ಅತ್ಯಾಚಾರ ಎಸಗಲಾಗಿದೆ ಎಂದು ಸಂತ್ರಸ್ತೆಯ ಕುಟುಂಬ ಶಂಕಿಸಿದೆ.
ಉತ್ತರ ಪ್ರದೇಶದ ತಿವಾರಿಪುರ ಗ್ರಾಮದಲ್ಲಿ ಗೋಪಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.
14 ವರ್ಷದ ಬಾಲಕಿ ಗುರುವಾರ ಮಧ್ಯಾಹ್ನ 2:30ರ ಸುಮಾರಿಗೆ ಆಚೆ ಹೋಗಿದ್ದಳು. ಕೆಲ ಗಂಟೆ ಕಳೆದರೂ ಮನೆಗೆ ಹಿಂದಿರುಗದಿದ್ದಾಗ ಕುಟುಂಬಸ್ಥರು ಹುಡುಕಲು ಪ್ರಾರಂಭಿಸಿದ್ದಾರೆ. ಬಾಲಕಿಯ ರಕ್ತಸಿಕ್ತ ದೇಹ ಅವರ ಮನೆಯ ಸಮೀಪದ ಕೃಷಿ ಭೂಮಿಯಲ್ಲಿ ಪತ್ತೆಯಾಗಿದೆ.
ವರದಿಗಳ ಪ್ರಕಾರ, ದುಷ್ಕರ್ಮಿಗಳು ಅಪ್ರಾಪ್ತೆಯ ತಲೆಯನ್ನು ಕಲ್ಲಿನಿಂದ ಜಜ್ಜಿದ್ದಾರೆ ಎನ್ನಲಾಗಿದ್ದು, ಅವಳ ಮುಖದ ಮೇಲೆ ಉಗುರಿನ ಗುರುತುಗಳಿವೆ. ಕೊಲೆಗೂ ಮೊದಲು ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಕುಟುಂಬಸ್ಥರು ಶಂಕಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕುಟುಂಬದವರ ದೂರಿನ ಮೇರೆಗೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಇದು ವೈಯಕ್ತಿಕ ದ್ವೇಷದ ಪ್ರಕರಣವಾಗಿದ್ದು, ಅತ್ಯಾಚಾರ ಇನ್ನೂ ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.