ಕಾನ್ಪುರ (ಉತ್ತರ ಪ್ರದೇಶ): ಕಾನ್ಪುರದ ಚಾಕೆರಿ ಪಟ್ಟಣದಲ್ಲಿ 14 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿದ ನಾಲ್ಕು ಮಂದಿ ಕಾಮುಕರು, ಆಕೆಯನ್ನು ಎರಡು ದಿನಗಳ ಕಾಲ ಕೂಡಿ ಹಾಕಿ ಅತ್ಯಾಚಾರಗೈದಿರುವ ಘಟನೆ ನಡೆದಿದೆ. ಸ್ಥಳೀಯ ಪೊಲೀಸರು ಇಂದು (ಸೋಮವಾರ) ಈ ಕುರಿತು ಮಾಹಿತಿ ನೀಡಿದ್ದಾರೆ.
ಕಾಮುಕರು ಬಾಲಕಿಯನ್ನು ಬಲವಂತದಿಂದ ಅಪಹರಿಸಿ ಕೂಡಿ ಹಾಕಿ ಅತ್ಯಾಚಾರ ಮಾಡಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ (ಪೂರ್ವ) ರಾಜ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ. ಎರಡು ದಿನಗಳ ಕಾಲ ವಿವಿಧಡೆ ಕರೆದೊಯ್ದ ಕಾಮುಕರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಬಾಲಕಿ ತನ್ನ ಪೋಷಕರಿಗೆ ಮಾಹಿತಿ ನೀಡಿರುವುದಾಗಿ ಅಗರ್ವಾಲ್ ತಿಳಿಸಿದ್ದಾರೆ.
ಕೂಡಿ ಹಾಕಿದ್ದ ನಿಗೂಢ ಸ್ಥಳದಿಂದ ತಪ್ಪಿಸಿಕೊಂಡು ಬಂದ ಬಾಲಕಿ, ಭಾನುವಾರ ಸಂಜೆ ಹೇಗೋ ತನ್ನ ಮನೆ ಸೇರಿದ್ದಾಳೆ. ಬಳಿಕ ನಡೆದ ಘಟನೆಯನ್ನು ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ನೀಡಿದ ದೂರಿನ ಹಿನ್ನೆಲೆ ಅಟ್ಟಹಾಸ ಮೆರೆದ ಕಾಮುಕರನ್ನು ಇಂದು ಬಂಧಿಸಿರುವುದಾಗಿ ಎಸ್ಪಿ ಅಗರ್ವಾಲ್ ಖಚಿತಪಡಿಸಿದ್ದಾರೆ. ರಾಹುಲ್ ಸೋಂಕರ್ ಮತ್ತು ಮಿಥುನ್ ಸೋಂಕರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಕ್ಕಿ ರಾಜ್‌ಪೂತ್ ಮತ್ತು ಸಾಹಿಲ್ ಬಾಲ್ಮಿಕಿ ಎಂಬಿಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕತ್ತು ಹಿಸುಕಿ ಕೊಲೆಗೈದು ಕಾಮುಕರ ಅಟ್ಟಹಾಸ
ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಅಡಿಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಬಾಲಕಿಯನ್ನು ಇದೀಗ ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ.