ನವದೆಹಲಿ : ಸಿಎಂ ಯೋಗಿ ಆದಿತ್ಯನಾಥ್ ಕೋವಿಡ್-19 ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಪ್ರಶ್ನಿಸಿದ್ದಕ್ಕಾಗಿ ಬಂಧಿತರಾಗಿರುವ ಯುಪಿ ಕಾಂಗ್ರೆಸ್ ಮುಖಂಡ ಸಚಿನ್ ಚೌಧರಿಯ ಬಿಡುಗಡೆಗಾಗಿ ಇಬ್ಬರು ಮಕ್ಕಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಈ ಕುರಿತು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಬಂಧಿತ ಕಾಂಗ್ರೆಸ್ ನಾಯಕನ ಎರಡು ಮತ್ತು ಏಳು ವರ್ಷದ ಪುಟಾಣಿ ಮಕ್ಕಳು, ನಮ್ಮ ತಂದೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ದೌರ್ಬಲ್ಯಗಳನ್ನು ಎತ್ತಿ ತೋರಿಸಲು ಪತ್ರಿಕಾಗೋಷ್ಠಿ ನಡೆಸಿದ್ದಕ್ಕಾಗಿ ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ದೂರಿದ್ದಾರೆ.
ಅಲ್ಲದೆ ಲಾಕ್ಡೌನ್ನಿಂದ ತಮ್ಮ ಊರುಗಳಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕರಿಗೆ ಮಾರ್ಚ್ 25ರಿಂದ ದೆಹಲಿ-ಮೊರದಾಬಾದ್ ರಾಷ್ಟ್ರೀಯ ಹೆದ್ದಾರಿ ಬಳಿ ನಮ್ಮ ತಂದೆ ಆಹಾರ ವಿತರಿಸಿದ್ದಾರೆ ಎಂದು ತಮ್ಮ ತಾಯಿಯ ಮೂಲಕ ಮಕ್ಕಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮಕ್ಕಳು ಸಲ್ಲಿಸಿರುವ ಅರ್ಜಿ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠದ ಮುಂದೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಗುರುವಾರ ವಿಚಾರಣೆಗೆ ಬರಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಜಿದಾರರ ಪರ ವಕೀಲ ಸ್ಮಾರ್ಹರ್ ಸಿಂಗ್, ನಮ್ಮ ಕಕ್ಷಿದಾರ ಕಾಂಗ್ರೆಸ್ ಮುಖಂಡರಾಗಿದ್ದಾರೆ. ಸರ್ಕಾರದ ತಪ್ಪು ನಡೆಗಳನ್ನ ವಿರೋಧಿಸುವವರಾಗಿದ್ದರು. ಹೀಗಾಗಿ ರಾಜಕೀಯ ದುರುದ್ದೇಶದಿಂದ ಅವರನ್ನು ಬಂಧಿಸಲಾಗಿದೆ ಎಂದಿದ್ದಾರೆ.