ಬರ್ಲಿನ್: ಆರ್ಥಿಕತೆಗೆ ಪುನಶ್ಚೇತನ ನೀಡಲು ಅಮೆರಿಕದ ಕ್ಯಾಂಪ್ ಡೇವಿಡ್ ನಗರದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಜರ್ಮನಿ ಚಾನ್ಸಲರ್ ಏಜೆಂಲಾ ಮರ್ಕೆಲ್ ಅವರ ಕಚೇರಿ ಮೂಲಗಳು ತಿಳಿಸಿವೆ.
ಕೊರೊನಾ ವೈರಸ್ ಹರಡುತ್ತಿರುವ ವಾತಾವರಣ ಬದಲಾಗುವವರೆಗೂ ಯಾವುದೇ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿವೆ.
ಜೂನ್ 10 ರಿಂದ 12ರ ವರೆಗೆ ಅಮೆರಿಕದ ಕ್ಯಾಂಪ್ ಡೇವಿಡ್ ನಗರದಲ್ಲಿ ಜಿ-7 ಶೃಂಗಸಭೆ ನಡೆಯಲಿದೆ. ಕೋವಿಡ್-19ನಿಂದಾಗಿರುವ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಮಹತ್ವದ ಯೋಜನೆಗಳಿಗೆ ಸಹಿ ಹಾಕುತ್ತಿದ್ದೇವೆ. ಹೀಗಾಗಿ ಎಲ್ಲರೂ ಖುದ್ದು ಹಾಜರಾಗಬೇಕು ಎಂದು ಕಳೆದೊಂದು ವಾರದ ಹಿಂದಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.
ಟ್ರಂಪ್ ಅವರ ಹೇಳಿಕೆ ಹೊರಬೀಳುತ್ತಿದ್ದಂತೆ ಮರ್ಕೆಲ್, ಸಭೆಗೆ ಖುದ್ದು ಹಾಜರಾಗಬೇಕೇ ಇಲ್ಲ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕೇ ಎಂಬ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದರು. ಇದೀಗ ಕೊರೊನಾ ಪರಿಸ್ಥಿತಿಯಿಂದ ಮುಕ್ತಿ ಹೊಂದಿ ಸಹಜ ಸ್ಥಿತಿಗೆ ಮರಳುವವರೆಗೂ ಯಾವುದೇ ಸಭೆಯಲ್ಲಿ ಖುದ್ದು ಭಾಗಿಯಾಗುವುದಿಲ್ಲ ಎಂದು ಮರ್ಕೆಲ್ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.