ಮೀರತ್ (ಉತ್ತರ ಪ್ರದೇಶ): ಅಧಿಕೃತ ಮಾರ್ಗಸೂಚಿಗಳ ಪ್ರಕಾರ ಕೊರೊನಾ ವೈರಸ್ ಹಾಟ್‌ಸ್ಪಾಟ್ ಎಂದು ಘೋಷಿಸಲ್ಪಟ್ಟ ನಗರದ ಜಾಲಿ ಕೋತಿ ಪ್ರದೇಶವನ್ನು ಮೊಹರು ಮಾಡಲು ಜಿಲ್ಲಾಧಿಕಾರಿಗಳ ತಂಡ ತೆರಳಿದಾಗ ಕಲ್ಲು ತೂರಾಟ ನಡೆದಿದ್ದು ನಗರ ಮ್ಯಾಜಿಸ್ಟ್ರೇಟ್ ಗಾಯಗೊಂಡಿದ್ದಾರೆ.
ಈ ಪ್ರದೇಶದಲ್ಲಿ ನಾಲ್ಕು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದ ನಂತರ ತಬ್ಲಿಘಿ ಜಮಾತ್ ಸಂಪರ್ಕ ಹೊಂದಿದ ಮೂವರು ಮತ್ತು ಈ ಪ್ರದೇಶದ ಮಸೀದಿಯ ಓರ್ವನನ್ನು ಒಳಗೊಂಡಂತೆ ನಾಲ್ಕು ಜನರ ವಿರುದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಆರೋಗ್ಯ ಮತ್ತು ನಾಗರಿಕ, ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡವು ತೆರಳಿದಾಗ ಒಂದು ಸಮುದಾಯದ ಜನರು ಕಲ್ಲು ತೂರಾಟ ನಡೆಸಿದ್ದು, ನಗರ ಮ್ಯಾಜಿಸ್ಟ್ರೇಟ್ ಸತೇಂದ್ರ ಕುಮಾರ್ ಸಿಂಗ್ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಸಾಹ್ನಿ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಡಳಿತವು ಶನಿವಾರ ಬೆಳಿಗ್ಗೆ ಈ ಪ್ರದೇಶವನ್ನು ಕೊರೊನಾ ವೈರಸ್ ಹಾಟ್‌ಸ್ಪಾಟ್ ಎಂದು ಘೋಷಿಸಿತು. ನಂತರ ಈ ಪ್ರದೇಶವನ್ನು ಮೊಹರು ಮಾಡಲು ತಂಡವನ್ನು ಕಳುಹಿಸಿತ್ತು. ಈ ಸಂಧರ್ಭ ಜನರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಅಗಮಿಸಿ, ಜನರನ್ನು ವಶಕ್ಕೆ ಪಡೆದರು. ಜಿಲ್ಲಾ ಪೊಲೀಸ್ ವಕ್ತಾರ ಪ್ರಮೋದ್ ಗೌತಮ್ ಮಾತನಾಡಿ, ಕೊರೊನಾ ಪಾಸಿಟಿವ್ ಎಂದು ಕಂಡು ಬಂದ ನಾಲ್ವರನ್ನು ಆರೋಗ್ಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.