ನವದೆಹಲಿ : ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ಮುಷ್ಕರಕ್ಕೆ ದೆಹಲಿ ಮತ್ತು ದೇಶದ ಇತರ ನಗರಗಳಲ್ಲಿನ ಹಲವಾರು ಆಸ್ಪತ್ರೆಗಳ ವೈದ್ಯರು ಬೆಂಬಲ ನೀಡಿದ್ದಾರೆ.
ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ) ನೀಡಿದ "ಮಿಕ್ಸೋಪತಿ" ಅಧಿಸೂಚನೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದು, ಅಧಿಸೂಚನೆಯನ್ನು ವಾಪಸ್ ಪಡೆಯುವಂತೆ ವೈದ್ಯರು ಒತ್ತಾಯಿಸಿದ್ದಾರೆ.
ಐಎಂಎ ತನ್ನ ಹೇಳಿಕೆಯಲ್ಲಿ ದೇಶದ ವಿವಿಧ ಆಸ್ಪತ್ರೆಗಳ ಹೆಚ್ಚಿನ ಸಂಖ್ಯೆಯ ವೈದ್ಯರು ನಮ್ಮ ಕರೆಗೆ ಸ್ಪಂದಿಸಿದರು ಮತ್ತು ತಮ್ಮ ಸೇವೆಯಿಂದ ದೂರ ಉಳಿದರು. ಇದು ರೋಗಿಗಳ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದೆ. ಆದರೆ, ಇದೇ ವೇಳೆ ತುರ್ತು ಸೇವೆಗಳು ಹಾಗೂ ಕೋವಿಡ್-19 ಸೇವೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ದೆಹಲಿಯ ಏಮ್ಸ್‌ನ ವೈದ್ಯರು ಮತ್ತು ಎಲ್ಎನ್ ಜೆಪಿ ಆಸ್ಪತ್ರೆ, ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಡಿಡಿಯು ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ಬಿಎಸ್ಎ ಆಸ್ಪತ್ರೆ, ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆ ಮತ್ತು ಸರ್ಕಾರ ನಡೆಸುತ್ತಿರುವ ಹಿಂದೂ ರಾವ್ ಆಸ್ಪತ್ರೆ ಸೇರಿದಂತೆ ದೆಹಲಿಯ ಹಲವು ಆಸ್ಪತ್ರೆಗಳ ವೈದ್ಯರು ನಮ್ಮ ತೋಳಿಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
"ಸರ್ಕಾರದ ಈ ಕ್ರಮವು ಅತಿರೇಕದ ಚಮತ್ಕಾರ ಪ್ರೋತ್ಸಾಹಿಸುವಂತಿದೆ. ಆದರೆ, ಇದು ಸಾರ್ವಜನಿಕರ ಸುರಕ್ಷತೆಯನ್ನು ಹಾಳು ಮಾಡುತ್ತದೆ. ಈ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ನಾವು ಒತ್ತಾಯಿಸುತ್ತೇವೆ" ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗೆಯೇ ಐಎಂಎ ನಿರ್ಧಾರವನ್ನು ಬೆಂಬಲಿಸುವುದಾಗಿ ಘೋಷಿಸಿದೆ.
ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅವಕಾಶ ನೀಡುವ ಸಿಸಿಐಎಂ ಹೊರಡಿಸಿದ ಅಧಿಸೂಚನೆ ಮತ್ತು "ಮಿಕ್ಸೋಪತಿ"ಗೆ ಮಾತ್ರ ಕಾರಣವಾಗುತ್ತದೆ ಎಂದು ಐಎಂಎ ತಿಳಿಸಿದೆ. ಐಎಂಎ ಅಧ್ಯಕ್ಷ ಡಾ.ರಾಜನ್ ಶರ್ಮಾ ಮಾತನಾಡಿ, "ಆಯುರ್ವೇದದ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡುವುದು ರೋಗಿಗಳ ಆರೋಗ್ಯದ ಪರಿಣಾಮ ಬೀರಲಿದೆ.. ಹೀಗಾಗಿ ಮಿಕ್ಸೋಪತಿಯನ್ನು ಮುಂದುವರಿಸುವ ಮತ್ತು ನ್ಯಾಯಸಮ್ಮತಗೊಳಿಸುವ ಕುರಿತಂತೆ ಮತ್ತಷ್ಟು ಯೋಚನೆ ಮಾಡಬೇಕು"ಎಂದು ಅವರು ಹೇಳಿದರು.
ಶುಕ್ರವಾರ, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶ, ಗೋವಾದ ಇತರ ಆಸ್ಪತ್ರೆಗಳ ವೈದ್ಯರು ಐಎಂಎ ಕರೆಗೆ ಸ್ಪಂದಿಸಿ ಒಪಿಡಿ ಸೇವೆಗಳನ್ನು ಬಂದ್ ಮಾಡುವ ಮೂಲಕ ವೈದ್ಯರ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ರು. ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಮತ್ತು ಆರೋಗ್ಯ ಕೇಂದ್ರಗಳು ಸಹ ಕರೆಗೆ ಬೆಂಬಲ ನೀಡಿವೆ.
ಐಎಂಎಯ ಉತ್ತರಪ್ರದೇಶ ಘಟಕದ ಅಧ್ಯಕ್ಷ ಡಾ.ಅಶೋಕ್ ರೈ ಅವರ ಪ್ರಕಾರ, ರಾಜ್ಯದ 21,500 ಖಾಸಗಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಮತ್ತು ಖಾಸಗಿ ವೈದ್ಯರು ಮುಷ್ಕರ ಬೆಂಬಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಅವಧಿಯಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆ ಮತ್ತು ತುರ್ತು ಸೇವೆಗಳು ಮಾತ್ರ ಲಭ್ಯವಿದೆ ಎಂದು ಅವರು ಹೇಳಿದರು. ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಕೂಡ ಐಎಂಎಗೆ ಸಹಕರಿಸಿದೆ.
ಐಎಂಎ ಕರೆ ನೀಡಿದ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಗೋವಾದ ಸುಮಾರು 1,500 ವೈದ್ಯರು ಭಾಗವಹಿಸಿದ್ದರು. ಐಎಂಎ ನಿಯೋಗವು ಕೇಂದ್ರ ಆಯುಷ್ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರನ್ನು ಶುಕ್ರವಾರ ಭೇಟಿ ಮಾಡಿ ಆಯುರ್ವೇದದ ಸ್ನಾತಕೋತ್ತರ ವೃತ್ತಿಗಾರರಿಗೆ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ತರಬೇತಿ ನೀಡಲು ಅನುವು ಮಾಡಿಕೊಡುವ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಜ್ಞಾಪಕ ಪತ್ರವನ್ನು ಸಲ್ಲಿಸಲಾಗಿದೆ ಎಂದು ಐಎಂಎಯ ಗೋವಾ ಘಟಕದ ಅಧ್ಯಕ್ಷ ಡಾ. ಎ ಸ್ಯಾಮ್ಯುಯೆಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೇರಳ ರಾಜ್ಯದಲ್ಲಿ ಕೂಡ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು ಐಎಂಎ ಕರೆಗೆ ಬೆಂಬಲ ಸೂಚಿಸಿದ ಹಿನ್ನೆಲೆ ವೈದ್ಯಕೀಯ ಸೇವೆಗಳಿಗೆ ಹೊಡೆತ ಬಿದ್ದಿದೆ. ತಿರುವನಂತಪುರಂನ ರಾಜಭವನಕ್ಕೆ ವೈದ್ಯರು ಮೆರವಣಿಗೆ ಸಹ ನಡೆಸಿದ್ದಾರೆ.
ಇದನ್ನೂ ಓದಿ:ಮರಗಳ ಹನನ ತಡೆಗೆ ಮರಗಳ ಮೇಲೆ ಪ್ರಧಾನಿ ಮೋದಿಯ ಭಾವಚಿತ್ರ ಕೆತ್ತಿದ ಕಲಾವಿದ