ಹೈದರಾಬಾದ್: ಸತತ ಸಂಶೋಧನೆ-ಪ್ರಯೋಗದ ಬಳಿಕ, ಬಹುರಾಷ್ಟ್ರೀಯ ಔಷಧ ಸಂಸ್ಥೆ ಫಿಜರ್ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಮಾನವ ಪ್ರಯೋಗ (ಕ್ಲಿನಿಕಲ್ ಟ್ರಯಲ್ಸ್) ನ ಮೂರನೇ ಹಂತದಲ್ಲಿ ಕೋವಿಡ್-19 ವಿರುದ್ಧ ರಕ್ಷಣೆ ನೀಡುವಲ್ಲಿ ಅತಿ ಹೆಚ್ಚಿನ ಯಶಸ್ಸು ಸಾಧಿಸಿದೆ ಎಂಬ ಪ್ರಕಟಣೆ, ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ನವೋಲ್ಲಾಸ ತುಂಬಿದೆ.
ಅಮೆರಿಕದ ಷೇರು ಮಾರುಕಟ್ಟೆ ಡೌ ಸುಮಾರು ಶೇ 3, ಎಸ್ & ಪಿ 500 ಶೇ1.17 ರಷ್ಟು ಏರಿಕೆ ದಾಖಲಿಸಿದೆ. ವಿಶ್ವದ ಪ್ರಮುಖ ಷೇರು ಮಾರುಕಟ್ಟೆಗಳು ಇದೆ ದಾರಿಯಲ್ಲಿ ಸಾಗಿವೆ. ಇವುಗಳಿಗೆಲ್ಲ ಏಕೈಕ ಅಪವಾದವೆಂದರೆ ನಾಸ್ಡಾಕ್ ಷೇರು ಮಾರುಕಟ್ಟೆ. ನಾಸ್ಡಾಕ್ ವ್ಯವಹಾರ ಮುಕ್ತಾಯದ ಸಮಯದಲ್ಲಿ ಶೇ 1.5ರಷ್ಟು ಕುಸಿದಿದೆ. ಷೇರು ಮಾರುಕಟ್ಟೆಯ ಈ ನವೋಲ್ಲಾಸದ ಬಗ್ಗೆ ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿರುವ ಹಿರಿಯ ಆರ್ಥಿಕ ತಜ್ಞರು, ಕೋವಿಡ್ ಸಾಂಕ್ರಾಮಿಕ ರೋಗ ಸೃಷ್ಟಿಸಿರುವ ಬಿಕ್ಕಟ್ಟಿನ ಸುದೀರ್ಘ ಅವಧಿಯ ಬಳಿಕ, ಈ ಕಗ್ಗತ್ತಲ ಸುರಂಗದ ಕೊನೆ ಕಾಣಿಸಿಕೊಂಡಿದೆ. ಸುರಂಗದ ಕೊನೆಯಲ್ಲಿ ಬೆಳಕು ಕಾಣುತ್ತಿರುವುದರಿಂದ ಜನರು ಮತ್ತೆ ಹಳೆಯ ಸಂತೋಷದ ದಿನಗಳಿಗೆ ಮರಳುತ್ತಿದ್ದಾರೆ ಮತ್ತು ಇದಕ್ಕೆ ಪೂರಕವಾಗಿ ಮಾರುಕಟ್ಟೆಗಳು ಕೂಡ ಪ್ರತಿಕ್ರಿಯಿಸುತ್ತಿವೆ ಎಂದು ತಿಳಿಸಿದ್ದಾರೆ.
ಮಾರುಕಟ್ಟೆಯ ಟ್ರೇಡಿಂಗ್ ಅವಧಿಯಲ್ಲಿ, ಡೌ ಮತ್ತು ಎಸ್ & ಪಿ 500 ಇತ್ತೀಚಿನ ದಿನಗಳಲ್ಲೆ ಗರಿಷ್ಠ ಎನ್ನಬಹುದಾದ ಇಂಟ್ರಾಡೇ ದಾಖಲೆ ಸೃಷ್ಟಿಸಿದೆ. ಡೌ ಜೋನ್ಸ್ ಇಂಟ್ರಾಡೇ ಗರಿಷ್ಠ 1,600 ಏರಿಕೆ ಕಂಡು (ಶೇ5.7) ಸೋಮವಾರದಂದು 29,934 ಕ್ಕೆ ತಲುಪಿದೆ. ಇದು ಈ ವರ್ಷದ ಫೆಬ್ರವರಿ 12 ರ ನಂತರದ ಗರಿಷ್ಠ ಸೂಚ್ಯಂಕವಾಗಿದೆ. ಎಸ್ & ಪಿ 500 ಗರಿಷ್ಠ ಸೂಚ್ಯಂಕ ಏರಿಕೆ ಕಂಡು, 3,646 ಅನ್ನು ಮುಟ್ಟಿದೆ, ಇದು ಸೆಪ್ಟೆಂಬರ್ 2 ರ ಬಳಿಕದ ಗರಿಷ್ಠ ಮಟ್ಟವಾಗಿದೆ. ಆದರೆ ಗರಿಷ್ಠ ಏರಿಕೆ ಬಳಿಕ, ಎರಡೂ ಸೂಚ್ಯಂಕಗಳು ಸ್ವಲ್ಪ ಕಡಿಮೆಗೊಂಡವು. ಆದರೆ ದಿನದ ಅಂತ್ಯದ ವೇಳೆಗೆ, ಹೆಚ್ಚು ಮಧ್ಯಮ ಮಟ್ಟದಲ್ಲಿ ಸ್ಥಿರತೆ ಕಂಡವು.
ಇಂಡಿಯಾ ರೇಟಿಂಗ್ಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಸುನಿಲ್ ಸಿನ್ಹಾ ಈ ಷೇರು ಮಾರುಕಟ್ಟೆಯ ಏರಿಕೆ ಬಗ್ಗೆ ಆಶಾವಾದದ ಮಾತುಗಳನ್ನಾಡಿದ್ದಾರೆ. ಸುರಂಗದ ಕತ್ತಲಲ್ಲಿ ತಡಕಾಡುತ್ತಿರುವವರಿಗೆ, ಇದ್ದಕ್ಕಿದ್ದಂತೆ ಸುರಂಗದ ಕೊನೆಯಲ್ಲಿ ಬೆಳಕು ಕಾಣಿಸಿಕೊಳ್ಳುತ್ತದೆ. ಆಗ ಸಿಗುವ ಆನಂದವೇ ಇಲ್ಲಿ ಪ್ರತಿಫಲಿಸುತ್ತಿದೆ. ಹಲವಾರು ಯುರೋಪಿಯನ್ ರಾಷ್ಟ್ರಗಳು ಈಗ ಕೋವಿಡ್ ಎರಡನೇ ಅಲೆಯ ಭೀತಿಯಲ್ಲಿವೆ. ಈ ಎರಡನೇ ಅಲೆ, ಕಳೆದ 6 ತಿಂಗಳ ಅವಧಿಯಲ್ಲಿ ಸಾಧಿಸಿದ್ದನ್ನೆಲ್ಲ ಮಣ್ಣು ಪಾಲು ಮಾಡುವ ಸಾಧ್ಯತೆ ಇತ್ತು. ಇಂತಹ ಸಂದರ್ಭದಲ್ಲಿ, ಈ ಲಸಿಕೆ ಕುರಿತ ಸುದ್ದಿ, ಎಲ್ಲರಲ್ಲೂ ಆಶಾಭಾವನೆ ಮೂಡಿಸಿದೆ ಎನ್ನುತ್ತಾರೆ ಅವರು.
ಈ ಲಸಿಕೆ ಕುರಿತ ಮಾಹಿತಿ, ಎಲ್ಲರಿಗೂ ಖುಷಿತಂದಿದೆ ಮತ್ತು ಮಾರುಕಟ್ಟೆಗಳು ಅದಕ್ಕೆ ಏರಿಕೆ ದಾಖಲೆ ಮೂಲಕ ಪ್ರತಿಕ್ರಿಯಿಸುತ್ತಿವೆ, ಎಂದು ಸಿನ್ಹಾ ಈಟಿವಿ ಭಾರತಕ್ಕೆ ತಿಳಿಸಿದರು.
ಸೋಮವಾರ, ಫಿಜರ್ ತನ್ನ ಮೂರನೇ ಹಂತದ ಮಾನವ ಪ್ರಯೋಗದಲ್ಲಿರುವ ಕೋವಿಡ್ ಲಸಿಕೆ, ಈ ಹಂತದಲ್ಲಿ ಕೋವಿಡ್ ಸೋಂಕಿನ ವಿರುದ್ಧ ಶೇ 90ರಷ್ಟು ಪರಿಣಾಮಕಾರಿ ರಕ್ಷಣೆ ನೀಡುತ್ತದೆ ಎಂದು ಮಾಹಿತಿ ನೀಡಿತು. ಈ ಸುದ್ದಿ ಮತ್ತು ಇತರ ಬೆಳವಣಿಗೆಗಳೊಂದಿಗೆ, ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರೆಟಿಕ್ ಅಭ್ಯರ್ಥಿ ಜೋಸೆಫ್ ಬೈಡನ್ ಜಯಗಳಿಸಿದ ಸುದ್ದಿ, ಈಕ್ವಿಟಿ ಮಾರುಕಟ್ಟೆಗಳಲ್ಲಿ ದೊಡ್ಡ ಮಟ್ಟದ ಸೂಚ್ಯಂಕ ಏರಿಕೆಗೆ ಕಾರಣವಾಯಿತು.
ಅಮೆರಿಕದ ಎಲ್ಲಾ ಮೂರು ಪ್ರಮುಖ ಮಾರುಕಟ್ಟೆ ಗಳಲ್ಲಿ ಷೇರು ಮಾರುಕಟ್ಟೆ ಫ್ಯೂಚರ್ಸ್ ಅಧಿಕ ಮಟ್ಟದಲ್ಲಿ ಆರಂಭಗೊಂಡಿತು. ಎಸ್ & ಪಿ 500 ಫ್ಯೂಚರ್ಸ್ ಮತ್ತು ಡೌ ಫ್ಯೂಚರ್ಸ್ ಮೂರನೇ ಒಂದು ಭಾಗದಷ್ಟು ಸೂಚ್ಯಂಕದಿಂದ ಏರಿಕೆಯೊಂದಿಗೆ ತೆರೆದರೆ, ನಾಸ್ಡಾಕ್ ಫ್ಯೂಚರ್ಸ್ ಅರ್ಧಕ್ಕಿಂತ ಹೆಚ್ಚಿನ ಮಟ್ಟದೊಂದಿಗೆ ವ್ಯವಹಾರ ಆರಂಭಿಸಿತು.
ಧನಾತ್ಮಕ ಸುದ್ದಿ ಸರಪಣಿ (ಡೊಮಿನೊ) ಪರಿಣಾಮ:
ವಿಶ್ವದ ಆರ್ಥಿಕತೆ ಮತ್ತು ಮಾರುಕಟ್ಟೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಸಿನ್ಹಾ, ಜನ ಜೀವನ ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಸ್ಥಿತಿಗೆ ಬರುವುದು, ಎಲ್ಲೆಡೆ ಆರ್ಥಿಕತೆ ಪುನರುಜ್ಜೀವನಕ್ಕೆ ಪೂರಕವಾಗಿರುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.
ಆರ್ಥಿಕತೆ ಮತ್ತೆ ಹಳಿಗೆ ಮರಳಿದರೆ, ಕಾರ್ಪೊರೇಟ್ ಫಲಿತಾಂಶಗಳು ಸುಧಾರಿಸುತ್ತವೆ, ಮತ್ತು ಅವುಗಳು ಹೊಸ ಪ್ರಯೋಗಗಳಿಗೆ ತಯಾರಾಗುವ ಅಗತ್ಯ ಇರುವುದಿಲ್ಲ. ಇಂತಹ ಸನ್ನಿವೇಶದಲ್ಲಿ, ಎಲ್ಲವೂ, ಸಾಮಾನ್ಯ ಸ್ಥಿತಿಗೆ ಮರಳುತ್ತವೆ. ಇಂತಹ ವಾತಾವರಣ ಈಗ ಇದೆ ಎಂದು ಅವರು ಹೇಳಿದರು.
ವಿಶ್ವ ಷೇರು ಮಾರುಕಟ್ಟೆಗಳ ನಾಗಾಲೋಟ, ಭಾರತದಲ್ಲೂ ಪ್ರತಿಫಲನ ಗೊಂಡಿದೆ. ಭಾರತದ ಪ್ರಮುಖ ಷೇರು ಮಾರುಕಟ್ಟೆಗಳಾದ ಬಿಎಸ್‌ಇ ಮತ್ತು ಎನ್‌ಎಸ್‌ಇ ಸೋಮವಾರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ.
30 ಷೇರುಗಳ ಸೂಚ್ಯಂಕ, ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕ 704 ಅಂಶಗಳಷ್ಟು (ಶೇ 1.68 ) ಜಿಗಿದು ಸಾರ್ವಕಾಲಿಕ ಗರಿಷ್ಠ ದಾಖಲೆಯಾದ 42,597 ಅಂಶಗಳಿಗೆ ತಲುಪಿದೆ. ಬಿಎಸ್ಇ 50 ಷೇರುಗಳ ಸೂಚ್ಯಂಕ, ಎನ್‌ಎಸ್‌ಇ ನಿಫ್ಟಿ ಕೂಡ 197.50 ಪಾಯಿಂಟ್‌ಗಳ ಏರಿಕೆಯೊಂದಿಗೆ 12,461 (ಶೇ 1.61ರಷ್ಟು) ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇದು ಸಾರ್ವಕಾಲಿಕ ಹೆಚ್ಚಳವಾಗಿದೆ.