ಪಾಟ್ನಾ: ಹಾವು ಹಿಡಿಯುವ ಕಲೆ ಕರಗತ ಮಾಡಿಕೊಂಡಿದ್ದ ವ್ಯಕ್ತಿಯೋರ್ವ ಸ್ವಲ್ಪ ಯಾಮಾರಿದ್ದರಿಂದ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಆತನ ಬದುಕು ದುರಂತ ಅಂತ್ಯ ಕಂಡಿದೆ.
ಬೆಲ್ಡೋರ್ ಪೊಲೀಸ್ ಠಾಣಾ ಪ್ರದೇಶದ ಪನ್ಸಲ್ವಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ ಅನೇಕ ವರ್ಷಗಳಿಂದ ಹಾವು ಹಿಡಿಯುವ ಕೆಲಸ ಮಾಡ್ತಿದ್ದ ಶಂಭು ಸಿಂಗ್, ನಿನ್ನೆ ವಿಷಪೂರಿತ ಹಾವು ಹಿಡಿದು ಡಿಜೆ ರಾಗಕ್ಕೆ ನೃತ್ಯ ಮಾಡ್ತಿದ್ದ ವೇಳೆ ಅದು ಕಚ್ಚಿದ್ದರಿಂದ ಸಾವನ್ನಪ್ಪಿದ್ದಾನೆ.
45 ವರ್ಷದ ಶಂಭು ಸಿಂಗ್ ಹಲವು ವರ್ಷಗಳಿಂದ ಹಾವು ಹಿಡಿಯುವ ಕೆಲಸ ಮಾಡ್ತಿದ್ದರು. ನಿನ್ನೆ ಹಾವು ಹಿಡಿದು ಗ್ರಾಮದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮವೊಂದರಲ್ಲಿ ವಿಷ ಪೂರಿತ ಹಾವು ಕೈಯಲ್ಲಿ ಹಿಡಿದು ನೃತ್ಯ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ಈ ವೇಳೇ ಅದು ಉರಗತಜ್ಞನಿಗೆ ಕಚ್ಚಿದೆ.
ಹಾವು ಕಚ್ಚಿದ ಅರ್ಧ ಗಂಟೆ ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಉರಗತಜ್ಞ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.ಗ್ರಾಮದ ಯಾವುದೇ ಮನೆಯಲ್ಲಿ ಅಥವಾ ಜಮೀನುಗಳಲ್ಲಿ ಹಾವು ಕಂಡು ಬಂದರೆ ಅವುಗಳನ್ನ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವ ಕೆಲಸವನ್ನ ಶಂಭು ಸಿಂಗ್ ಕಳೆದ ಅನೇಕ ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದರು. ಇದೀಗ ಹಾವು ಕಚ್ಚಿಸಿಕೊಂಡು ಆತ ದುರಂತ ಸಾವು ಕಂಡಿದ್ದು, ಇದಕ್ಕೆ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.