ಈ ಪಿಎಂಎಫ್‌ಬಿವೈ ಯೋಜನೆ ಅಡಿಯಲ್ಲಿ, ಆಹಾರ ಮತ್ತು ಖಾದ್ಯ ತೈಲದ ಮುಂಗಾರಿನ ಬೆಳೆಗಳಿಗೆ ಗರಿಷ್ಠ 2% ರಷ್ಟು ಪ್ರೀಮಿಯಂ ಅನ್ನು ರೈತರು ಪಾವತಿ ಮಾಡುತ್ತಾರೆ ಮತ್ತು ಹಿಂಗಾರಿಗೆ ಶೇ. 1.5% ರಷ್ಟು ಪ್ರೀಮಿಯಂ ಅನ್ನು ಪಾವತಿ ಮಾಡುತ್ತಾರೆ. ವಾರ್ಷಿಕ ವಾಣಿಜ್ಯ ಬೆಳೆಗಳಿಗೆ ಗರಿಷ್ಠ 5% ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ವಾಸ್ತವ ಪ್ರೀಮಿಯಂ ದರ ಮತ್ತು ರೈತರ ದರಗಳ ಮಧ್ಯದ ವ್ಯತ್ಯಾಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಭರಿಸುತ್ತವೆ. ಬೆಳೆ ಸಾಲವನ್ನು ಪಡೆದ ಎಲ್ಲ ರೈತರಿಗೂ ಪಿಎಂಎಫ್‌ಬಿವೈ ಸ್ಕೀಮ್ ಅನ್ವಯವಾಗುತ್ತದೆ. ಇತರ ರೈತರು ಪ್ರೀಮಿಯಂ ಪಾವತಿ ಮಾಡಿ ಸ್ವಪ್ರೇರಣೆಯಿಂದ ವಿಮೆ ಪಡೆದುಕೊಳ್ಳಬಹುದು. ಹವಾಮಾನದಿಂದಾಗಿ ಬಳೆ ನಷ್ಟ, ಕೀಟಗಳಿಂದ ಬೆಳೆ ನಷ್ಟ ಮತ್ತು ಕಟಾವು ನಂತರದ ನಷ್ಟಗಳು ಸೇರಿದಂತೆ ಹಲವು ರೀತಿಯ ರಿಸ್ಕ್‌ಗಳನ್ನು ಇದರಲ್ಲಿ ಕವರ್ ಮಾಡಲಾಗುತ್ತದೆ. ಬಹುತೇಕ ಬೆಳೆಗಳಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆಳೆಯ ಹಾನಿ ಮಟ್ಟವನ್ನು ಅಧರಿಸಿ ಅದನ್ನು ಅನುಷ್ಠಾನಗೊಳಿಸಲಾಗುತ್ತದೆ.
ಪರಿಣಾಮಕಾರಿ ಅನುಷ್ಠಾನದ ಬಗ್ಗೆ ರಾಜ್ಯಗಳಿಗೆ ಅನುಮಾನ
ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ವಿತ್ತ ವರ್ಷ 2017-18 ರಲ್ಲಿ ಐದು ಕೋಟಿ ರೈತರನ್ನು ನೋಂದಣಿ ಮಾಡಲಾಗಿತ್ತು. ಈ ಮೊದಲು ಇದ್ದ ವಿಮೆ ಯೋಜನೆಗೆ ಹೋಲಿಸಿದರೆ, 2015 ರಿಂದ ಇಂದು 40% ರಷ್ಟು ಹೆಚ್ಚಳ ಕಂಡಿದೆ. ಆದರೆ, ಇತ್ತೀಚಿನ ವರದಿಗಳು ಪಿಎಂಎಫ್‌ಬಿವೈ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿವೆ. ಕೆಲವು ರಾಜ್ಯಗಳು ಈ ಯೋಜನೆಯಿಂದ ಹೊರಬರಲು ನಿರ್ಧರಿಸಿವೆ. ಬಿಹಾರ ಮತ್ತು ಗುಜರಾತ್ ಈಗಾಗಲೇ ಈ ಯೋಜನೆಯಿಂದ ಹೊರಬಂದಿವೆ.
ವಿಮೆ ಕಂಪನಿಗಳು ಭಾರಿ ಮೊತ್ತದ ಪ್ರೀಮಿಯಂ (ರೂ. 4,500 ಕೋಟಿ) ಕೇಳಿದ ನಂತರ ರಾಜ್ಯ ಸರ್ಕಾರವು ಟೆಂಡರ್‌ಗಳನ್ನು ರದ್ದುಪಡಿಸಬೇಕಾಯಿತು ಎಂದು ಗುಜರಾತ್ ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ಈ ಯೋಜನೆ ಬದಲಿಗೆ, ಯಾವುದೇ ಪ್ರೀಮಿಯಂ ಇಲ್ಲೇ ಮುಂಗಾರು 2020 ಕ್ಕೆ 1700-1800 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ವಿಮೆ ಯೋಜನೆಯನ್ನು ಗುಜರಾತ್ ಸರ್ಕಾರ ಜಾರಿಗೆ ತಂದಿದೆ.
ಪ.ಬಂಗಾಳ ಮತ್ತು ಬಿಹಾರ ರಾಜ್ಯಗಳು ತಮ್ಮದೇ ಬೆಳೆ ವಿಮೆ ಯೋಜನೆಗಳನ್ನು ಹೊಂದಿವೆ. ಇದಕ್ಕೆ ರೈತರು ಪ್ರೀಮಿಯಂ ಪಾವತಿ ಮಾಡುವ ಅಗತ್ಯವಿಲ್ಲ. ಪಂಜಾಬ್ ಇಂದಿಗೂ ಪಿಎಂಎಫ್‌ಬಿವೈ ಅನ್ನು ಅನುಷ್ಠಾನ ಮಾಡಿಲ್ಲ. ಇನ್ನೂ ಕೆಲವು ರಾಜ್ಯ ಈ ವರ್ಷ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಸ್ಕೀಮ್‌ನಿಂದ ಹೊರಬರುವುದಾಗಿ ಹೇಳಿವೆ ಎನ್ನಲಾಗಿದೆ. ಬಹುತೇಕ ರಾಜ್ಯಗಳು ತಮ್ಮ ಪಾಲಿನ ಪ್ರೀಮಿಯಂ ಹಣದ ಪಾವತಿಯನ್ನು ವಿಳಂಬ ಮಾಡಿವೆ. ಇದರಿಂದ ರೈತರು ಕ್ಲೇಮ್ ಮಾಡಲು ಸಾಧ್ಯವಾಗಿಲ್ಲ.
ವರದಿಗಳ ಪ್ರಕಾರ ಮುಂಗಾರು 2019 ರ ಬೆಳೆ ವಿಮೆಯಲ್ಲಿ ಕಾಲು ಭಾಗದಷ್ಟು ಹಣವನ್ನೂ ವಿಮೆ ಕಂಪನಿಗಳು ರೈತರಿಗೆ ಒದಗಿಸಿಲ್ಲ. ಇದರಿಂದಾಗಿ ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ ಕೆಲವು ವಿಮೆ ಕಂಪನಿಗಳೇ ರೈತ ಸಮುದಾಯಕ್ಕಿಂತ ಹೆಚ್ಚಾಗಿ ಲಾಭ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಇದರ ಜೊತೆಗೆ, ನಿವಾರ್ ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಸರ್ಕಾರ ವಿಮೆ ಪ್ರೀಮಿಯಂ ಪಾವತಿ ಮಾಡದೇ ಇರುವುದು, ಹೊಸ ಕೃಷಿ ಕಾನೂನು ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದೂ ಸೇರಿದಂತೆ ಇತರ ಚರ್ಚೆಗಳು, ಗ್ರಾಮೀಣ ಭಾರತದ ಶೇ. 70 ರಷ್ಟು ಕುಟುಂಬಗಳಿಗೆ ಜೀವನಾಧಾರವಾದ ಕೃಷಿಗೆ ಪರಿಣಾಮಕಾರಿಯಾದ ಬೆಳೆ ವಿಮೆಯನ್ನು ಒದಗಿಸುವುದಕ್ಕೆ ಉತ್ತಮ ವಿಧಾನವನ್ನು ಅಳವಡಿಸಿಕೊಳ್ಳುವ ಕುರಿತು ಚರ್ಚೆಯನ್ನು ಹುಟ್ಟುಹಾಕಿವೆ.
ಸವಾಲುಗಳನ್ನು ಎದುರಿಸುವುದು
ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಐಐಎಂ ಅಹಮದಾಬಾದ್ ಆಯ್ದ ಒಂಬತ್ತು ರಾಜ್ಯಗಳಲ್ಲಿ ಪಿಎಂಎಫ್‌ಬಿವೈ ನಡೆಸಿದ ಅಧ್ಯಯನದ ಪ್ರಕಾರ, ಸಾಲ ಪಡೆದಾಗ ಸಾಲದ ಮೊತ್ತದ ಮೇಲೆ ಪ್ರೀಮಿಯಂ ಪಾವತಿ ಮಾಡಿದ ರೈತರಲ್ಲೂ ಸ್ಕೀಮ್ ಬಗ್ಗೆ ಅರಿವು ಇಲ್ಲದೇ ಇರುವುದು ತಿಳಿದುಬಂದಿದೆ. ಸ್ಕೀಮ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿಯು ಗಮನಾರ್ಹ ಪಾತ್ರ ವಹಿಸಿದೆ. ಅಸ್ಸಾಮ್‌ನಲ್ಲಿ ಬ್ಯಾಂಕ್‌ಗಳು ಗಮನಾರ್ಹ ಪಾತ್ರ ವಹಿಸಿವೆ. ಬಹುತೇಕ ರಾಜ್ಯಗಳಲ್ಲಿ ವಿಮೆ ಏಜೆಂಟರುಗಳ ಪ್ರಭಾವ ಅಷ್ಟೇನೂ ಇಲ್ಲದಿರುವುದು ಮಹತ್ವದ್ದಾಗಿ ಕಂಡುಬಂದಿದೆ. ಹೀಗಾಗಿ ಸಾಲ ಪಡೆಯದ ರೈತರು, ವಿಮೆಯನ್ನು ಸ್ವಪ್ರೇರಣೆಯಿಂದ ಪಡೆಯುವುದು ವಿಮೆ ಕಂಪನಿಗಳು ಮತ್ತು ಅವರ ಏಜೆಂಟರನ್ನು ಅವಲಂಬಿಸಿದೆ.
ಕಾಗದ ಪತ್ರಗಳನ್ನು ಪೂರ್ಣಗೊಳಿಸುವ ಸಮಯವನ್ನು ಕಡಿಮೆ ಮಾಡುವುದು, ಪರಿಹಾರ ಹೆಚ್ಚಳ, ಸ್ಕೀಮ್‌ನಲ್ಲಿ ಪಾರದರ್ಶಕತೆ, ಯೋಜನೆ ಬಗ್ಗೆ ಹೆಚ್ಚು ಅರಿವು, ಪ್ರಾಣಿಗಳನ್ನೂ ವಿಮೆಗೆ ಸೇರಿಸುವುದು ಮತ್ತು ಪಂಚಾಯಿತಿ ಪಾತ್ರದ ಹೆಚ್ಚಳದ ಬಗ್ಗೆ ಅಧ್ಯಯನದಲ್ಲಿ ರೈತರು ಬೇಡಿಕೆ ಇಟ್ಟಿದ್ದಾರೆ. ಅಧ್ಯಯನದ ಪ್ರಕಾರ, ಪಿಎಂಎಫ್‌ಬಿವೈಗೆ ಪಾಲಿಸಿಯ ಶೇ. 10 ರಷ್ಟು ಪ್ರೀಮಿಯಂ ವರೆಗೂ ಪಾವತಿ ಮಾಡಲು ಸಿದ್ಧವಿದ್ದಾರೆ. ಇದು ಸದ್ಯದ ದರಕ್ಕಿಂತ ಹೆಚ್ಚಿನ ಮೊತ್ತವಾಗಿದ್ದು, ನಷ್ಟ ಮೌಲ್ಯಮಾಪನ ಮಾಡಿದ ಆರು ವಾರಗಳೊಳಗೆ ಕ್ಲೇಮ್ ಸೆಟಲ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕೃಷಿ ಸಮುದಾಯದಲ್ಲಿ ಬೆಳೆ ವಿಮೆಗೆ ಭಾರಿ ಬೇಡಿಕೆ ಇರುವುದು ಇದರಿಂದ ಸಾಬೀತಾಗಿದೆ. ಇನ್ನೊಂದೆಡೆ, ಬೆಳೆ ವಿಮೆಯಲ್ಲಿ ಒಳ್ಳೆಯ ರಿಸ್ಕ್‌ಗಳಿಗಿಂತ ಕೆಟ್ಟ ರಿಸ್ಕ್‌ಗಳು ಹೆಚ್ಚಿರುವುದರಿಂದ ಇದನ್ನು ಲಾಭಯುತವಾದ ವ್ಯವಹಾರ ಎಂದು ವಿಮೆ ಕಂಪನಿಗಳು ಭಾವಿಸಿಲ್ಲ. ಈ ರೀತಿಯ ದೃಷ್ಟಿಕೋನವು ಈ ವ್ಯಾಪಾರದ ಮಾದರಿಯು ಸುಸ್ಥಿರವಾದದ್ದಲ್ಲ ಎಂದು ಭಾವಿಸುವಂತೆ ಮಾಡಿದೆ. ಮುಂದುವರಿದು, ವಿಮೆ ಕಂಪನಿಗಳಿಗೆ ಅವರು ವರ್ಗಾವಣೆ ಮಾಡಿದ 50% ಪ್ರೀಮಿಯಂ ಸಬ್ಸಿಡಿಯು ಅನಗತ್ಯ. ರೈತರು ಕೇವಲ ಸ್ವಲ್ಪ ಮಟ್ಟಿನ ಹಣವನ್ನಷ್ಟೇ ಪಡೆಯುತ್ತಾರೆ ಎಂದು ರಾಜ್ಯ ಸರ್ಕಾರಗಳು ಭಾವಿಸುತ್ತವೆ. ಆದರೆ, ವಿಮೆಯ ಮೂಲ ಧ್ಯೇಯವೇ ಈ ವಿಧಾನದಲ್ಲಿದೆ. ಕ್ಲೇಮ್‌ಗಳ ಪಾವತಿಯಲ್ಲಿ ಉಂಟಾಗಿರುವ ವಿಳಂಬವೂ ರೈತರ ದೃಷ್ಟಿಕೋನವನ್ನು ಬದಲಿಸಿವೆ.
ಬೆಳೆ ನಷ್ಟದ ನಿಖರ ಮೌಲ್ಯಮಾಪನವು ವಿಮೆಯಲ್ಲಿ ಒಂದು ಸವಾಲು. ತಾಂತ್ರಿಕವಾಗಿ ಇದನ್ನು ಬೆಳೆ ಫಸಲು ಪ್ರಯೋಗಗಳು (ಸಿಸಿಇಗಳು) ಎಂದು ಕರೆಯಲಾಗುತ್ತದೆ. ವಿಮೆ ಕಂಪನಿಗಳು ಸ್ಥಳೀಯವಾಗಿ ಕಚೇರಿಗಳನ್ನು ತೆರೆಯಬೇಕು. ಇದಕ್ಕೆ ಪರಿಣಿತಿ ಉದ್ಯೋಗಿಗಳನ್ನು ನೇಮಿಸಬೇಕು. ಈ ವ್ಯಾಪಾರ ಅವಕಾಶವನ್ನು ಅವರು ಬಳಸಿಕೊಳ್ಳಲು ದೀರ್ಘಕಾಲೀನ ಹೂಡಿಕೆ ಮಾಡಬೇಕಾಗುತ್ತದೆ. ರೈತರಿಗೆ ಕ್ಲೇಮ್ ಮೊತ್ತವನ್ನು ವಿತರಿಸಲು ಇರುವ ವಿಳಂಬವನ್ನು ಕಡಿಮೆ ಮಾಡಲು ಸ್ಮಾರ್ಟ್‌ಫೋನ್‌ಗಳು ಮತ್ತು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು. ಒಟ್ಟಾರೆಯಾಗಿ, ರಾಜ್ಯಗಳು, ರೈತರು ಮತ್ತು ವಿಮೆ ಕಂಪನಿಗಳಿಗೆ ಪಿಎಂಎಫ್‌ಬಿವೈ ಅನ್ನು ಹೆಚ್ಚು ಸಮಗ್ರವಾಗಿಸಲು ಮತ್ತು ಉತ್ತಮವಾಗಿ ಸಮ್ಮತಿಸಬಹುದಾದ ವಿಧಾನವನ್ನಾಗಿ ಮಾಡುವ ಇನ್ನಷ್ಟು ಅವಕಾಶಗಳಿವೆ. ಸಹಕಾರಿ ಕೇಂದ್ರ ವ್ಯವಸ್ಥೆಯ ಆಧಾರದಲ್ಲಿ, ಜಿಲ್ಲೆ ಮತ್ತು ಗ್ರಾಮ ಮಟ್ಟದ ಏಜೆನ್ಸಿಗಳನ್ನು ಚೆನ್ನಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಇನ್ನಷ್ಟು ಕೆಲಸ ಮಾಡಬೇಕಿದೆ.
ಎರಡು ತೆಲುಗು ರಾಜ್ಯಗಳಲ್ಲಿ ಪದೇ ಪದೇ ಚಂಡಮಾರುತಗಳು ಕಾಣಿಸಿಕೊಳ್ಳುವುದು, ಮಳೆ ಪ್ರಮಾಣದಲ್ಲಿ ವ್ಯತ್ಯಾಸವಾಗುವುದು, ತಾಪಮಾನ ಹೆಚ್ಚಳ ಮತ್ತು ದೀರ್ಘಕಾಲೀನ ಬರ ಪರಿಸ್ಥಿತಿಯಂತಹ ಸಮಸ್ಯೆಗಳು ಹೆಚ್ಚು ಪದೇ ಪದೇ ಕಾಣಿಸಿಕೊಳ್ಳುವುದರಿಂದ ಸಮಗ್ರ, ಎಲ್ಲರಿಗೂ ಒಪ್ಪುವಂತಹ ಮತ್ತು ಕೈಗೆಟಕುವ ಬೆಳೆ ವಿಮೆ ಪಾಲಿಸಿ ಅಗತ್ಯವಿದೆ. ಯಾಕೆಂದರೆ, ಪ್ರಸ್ತುತ ಪಿಎಂಎಫ್‌ಬಿವೈ ಅನ್ನು ಸಂಪೂರ್ಣವಾಗಿ ಸಮ್ಮತಿಸಲು ಸಾಧ್ಯವಿಲ್ಲ.
ಪಿಎಂಎಫ್‌ಬಿವೈ ಒಳ್ಳೆಯ ಉದ್ದೇಶದ ಸ್ಕೀಮ್ ಆಗಿದ್ದರೂ, ಇದನ್ನು ಇನ್ನೂ ಹೆಚ್ಚು ದಕ್ಷ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ. ಈ ಮೂಲಕ, ವರ್ಷ ಕಳೆದಂತೆ ರೈತರು ಬಡವಾಗುವುದನ್ನು ತಡೆಯಬಹುದು. ವಿಮೆಯೇ ಇಲ್ಲದ ಭಾರತದಲ್ಲಿ ಇದು ಒಂದು ಸವಾಲಿನ ಸಂಗತಿಯಂತೂ ಅಲ್ಲ.
ಡಾ. ಎನ್‌ವಿಆರ್ ಜ್ಯೋತಿ ಕುಮಾರ್ (ಮಿಜೋರಾಮ್ ಸೆಂಟ್ರಲ್ ಯೂನಿವರ್ಸಿಟಿ ವಾಣಿಜ್ಯ ವಿಭಾಗದ ಮುಖ್ಯಸ್ಥರು)