ಮುಂಬೈ: ನಟಿ ಊರ್ಮಿಳಾ ಮಾತೋಂಡ್ಕರ್ ಅವರನ್ನು ಮಹಾರಾಷ್ಟ್ರ ಸರ್ಕಾರ ವಿಧಾನ ಪರಿಷತ್‌ಗೆ ಶಿಫಾರಸು ಮಾಡಲಿದೆ ಎಂಬ ಊಹಾಪೋಹದ ಸುದ್ದಿ ಹರಡಿತ್ತು. ಈ ಬಗ್ಗೆ ಶಿವಸೇನೆ ಪಕ್ಷದ ವಕ್ತಾರ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದು, ಈ ಕುರಿತಾಗಿ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿದ್ದಾರೆ ಎಂದು ತಿಳಿಸಿದರು.
ಪರಿಷತ್ ಶಿಫಾರಸು ಮಾಡುವ 12 ವ್ಯಕ್ತಿಗಳ ಹೆಸರಿನ ಬಗ್ಗೆ ಗೌಪ್ಯತೆ ಕಾಯ್ದುಕೊಂಡಿರುವ ವಿಚಾರಕ್ಕೆ ಉತ್ತರಿಸಿದ ಅವರು, ಈ ಬಗ್ಗೆ ಯಾವುದೇ ಗೌಪ್ಯತೆ ಇಲ್ಲ. ಸರ್ಕಾರದ ಮೂರು ಮಿತ್ರಪಕ್ಷಗಳು ಹೆಸರುಗಳನ್ನು ಅಂತಿಮಗೊಳಿಸಿ ಸಿಎಂಗೆ ನೀಡಲಿದ್ದಾರೆ. ಸಿಎಂ ಈ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿಕೊಡುತ್ತಾರೆ ಎಂದು ತಿಳಿಸಿದರು.
ವಿಧಾನ ಪರಿಷತ್‌ನ 12 ಸ್ಥಾನಗಳು ಈ ವರ್ಷದ ಜೂನ್ ತಿಂಗಳಿನಿಂದ ಖಾಲಿ ಉಳಿದಿವೆ. ಸಂವಿಧಾನದ ವಿಧಿ 171 ರ ಪ್ರಕಾರ, ಕಲೆ, ಸಾಹಿತ್ಯ, ವಿಜ್ಞಾನ, ಸಹಕಾರಿ ಚಳವಳಿ ಹಾಗೂ ಸಮಾಜ ಸೇವೆ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನ, ಪ್ರಾಯೋಗಿಕ ಅನುಭವ ಹೊಂದಿರುವ 12 ವ್ಯಕ್ತಿಗಳನ್ನು ರಾಜ್ಯಪಾಲರು ವಿಧಾನ ಪರಿಷತ್‌ಗೆ ಶಿಫಾರಸು ಮಾಡುವ ಅಧಿಕಾರ ಹೊಂದಿದ್ದಾರೆ.
ಕಳೆದ 2019 ರ ಲೋಕಸಭೆ ಚುನಾವಣೆ ವೇಳೆ ಮಾತೋಂಡ್ಕರ್ ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದರು. ಬಳಿಕ ಅವರು ಮುಂಬೈ ಕಾಂಗ್ರೆಸ್‌ನ ಕಾರ್ಯವೈಖರಿಯಿಂದ ಬೇಸತ್ತು ಪಕ್ಷ ತ್ಯಜಿಸಿದ್ದರು. ಇತ್ತೀಚೆಗೆ ಅವರು ಕಂಗನಾ ರಣಾವತ್ ವಿರುದ್ಧ ಸಾಕಷ್ಟು ಟೀಕಾಪ್ರಹಾರ ನಡೆಸಿ ಗಮನ ಸೆಳೆದಿದ್ದರು.