ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಕನಿಷ್ಠ 11.4 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಈ ಋತುಮಾನದ ಅತಿ ಹೆಚ್ಚು ಚಳಿಯ ದಿನವಾಗಿದೆ. ಸಾಮಾನ್ಯವಾಗಿ ನವೆಂಬರ್ ತಿಂಗಳಿನ ಮೊದಲ ವಾರದಲ್ಲಿ ದೆಹಲಿಯಲ್ಲಿ ಸರಾಸರಿ 15 ರಿಂದ 16 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ ಈ ಬಾರಿ ನವೆಂಬರ್ನ ಮೊದಲ ದಿನವೇ ಉಷ್ಣಾಂಶ 11.4 ಕ್ಕೆ ಕುಸಿದು ಈ ಋತುವಿನ ಅತಿ ಚಳಿಯ ದಿನವಾಗಿ ದಾಖಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಫ್ದರಜಂಗ್ ಹವಾಮಾನ ಇಲಾಖೆ ಕಚೇರಿಯ ಪ್ರಾದೇಶಿಕ ಮುಖ್ಯಸ್ಥ ಕುಲ್ದೀಪ್ ಶ್ರೀವಾಸ್ತವ, ಆಕಾಶದಲ್ಲಿ ಮೋಡಗಳು ಇರದ ಕಾರಣ ಚಳಿ ಹೆಚ್ಚಾಗಿದೆ. ಭೂಮಿಯಿಂದ ಹೊರಸೂಸುವ ಅತಿನೇರಳೆ ಕಿರಣಗಳನ್ನು ಮೋಡಗಳು ಪ್ರತಿಫಲಿಸಿ ಮತ್ತೆ ಭೂಮಿಯೆಡೆಗೆ ಪ್ರತಿಬಿಂಬಿಸುತ್ತವೆ. ಇದರಿಂದ ಭೂಮಿಯ ವಾತಾವರಣ ಬೆಚ್ಚಗೆ ಉಳಿಯುವಂತಾಗುತ್ತದೆ. ಆದರೆ ಈ ಬಾರಿ ಮೋಡಗಳು ಇಲ್ಲದೆ ಇರುವುದು ಹಾಗೂ ಅತಿ ನಿಧಾನಗತಿಯ ಗಾಳಿಯ ಕಾರಣದಿಂದ ಚಳಿ ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಿದರು.
ದೆಹಲಿಯ ಇತಿಹಾಸದಲ್ಲಿ ಕಳೆದ ಅಕ್ಟೋಬರ್ ತಿಂಗಳು ಕಳೆದ 58 ವರ್ಷಗಳಲ್ಲಿಯೇ ಅತಿ ಹೆಚ್ಚು ಚಳಿಯ ತಿಂಗಳಾಗಿತ್ತು. ಕಳೆದ ಅಕ್ಟೋಬರ್ ತಿಂಗಳಲ್ಲಿ ಸರಾಸರಿ ಉಷ್ಣಾಂಶ 17.2 ಡಿಗ್ರಿ ಸೆಲ್ಷಿಯಸ್ ಇತ್ತು. ಇದು 1962 ರಲ್ಲಿ ಇದ್ದ 16.9 ಡಿಗ್ರಿ ಸೆಲ್ಷಿಯಸ್ ನಂತರ ಅಕ್ಟೋಬರ್ ತಿಂಗಳ ಅತಿ ಕಡಿಮೆ ಉಷ್ಣಾಂಶವಾಗಿದೆ ಎಂದು ಕುಲ್ದೀಪ್ ಶ್ರೀವಾಸ್ತವ ತಿಳಿಸಿದ್ದಾರೆ.
1937 ರ ಅಕ್ಟೋಬರ್ 31 ರಂದು ದೆಹಲಿಯಲ್ಲಿ 9.4 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದ್ದು, ಅತಿ ಹೆಚ್ಚು ಚಳಿಯ ದಿನವಾಗಿ ದಾಖಲಾಗಿದೆ.