ಅಲಿಗಢ/ಉತ್ತರಪ್ರದೇಶ : ಅನ್ಯಧರ್ಮೀಯ ಯುವಕ ಮತ್ತು ಯುವತಿ ಮದುವೆ ಆಗಲು ನ್ಯಾಯಾಲಯಕ್ಕೆ ಆಗಮಿಸಿದಾಗ ವಕೀಲರೇ ತಡೆದಿರುವ ಘಟನೆ ಅಲಿಗಢ್ನಲ್ಲಿ ನಡೆದಿದೆ.
ಯುಪಿಯಲ್ಲಿ ವಾರದ ಹಿಂದೆಯಷ್ಟೇ ಕಾನೂನು ಬಾಹಿರ ಅನ್ಯಧರ್ಮೀಯರ ವಿವಾಹ ತಡೆ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗಿದೆ. ಇದರ ಬೆನ್ನಲ್ಲೇ ಮದುವೆಗೆ ತಡೆಯೊಡ್ಡಿದ ಘಟನೆ ಇಂದು ನಡೆದಿದೆ. ಅಲ್ಲದೇ ಯುವಕನನ್ನು ಥಳಿಸಲಾಗಿದೆ ಎಂಬ ಆಪಾದನೆ ಸಹ ಕೇಳಿ ಬಂದಿದೆ.
ಅಲಿಗಢ್ ಮೂಲದ ಯುವಕ ಮತ್ತು ಚಂಡೀಗಢ್ ಮೂಲದ ಯುವತಿ ಫೇಸ್ಬುಕ್ನಲ್ಲಿ ಸ್ನೇಹಿತರಾಗಿದ್ದು, ಕಾನೂನಾತ್ಮಕವಾಗಿ ಮದುವೆಯಾಗಲು ಇಂದು ಕೋರ್ಟ್ಗೆ ಆಗಮಿಸಿದ್ದರು. ವಕೀಲರು ಅವರನ್ನು ಕಂಡು ಲವ್ಜಿಹಾದ್ ಎಂದು ಅಸಮಾಧಾನಗೊಂಡು ಅವರಿಗೆ ಆ ಕುರಿತು ತಿಳಿ ಹೇಳಲು ಪ್ರಯತ್ನಿಸಿದ್ದಾರೆ. ಆದ್ರೆ, ಅವರ ಮಾತನ್ನು ಒಪ್ಪದ ಹಿನ್ನೆಲೆ, ಯುವಕನನ್ನು ಹೀನಾಯವಾಗಿ ಥಳಿಸಿದ್ದಾರೆ ಎನ್ನಲಾಗಿದೆ.
ವಕೀಲರು ಆ ಯುವಕನಿಗೆ ಏನನ್ನೂ ಹೇಳಲು ಅವಕಾಶ ಮಾಡಿಕೊಡದೆ ಹಲ್ಲೆಗೈದಿದ್ದಾರೆ. ಆ ವೇಳೆ ಯುವಕ ಕೂಗುತ್ತಾ, ನನ್ನ ಹೆಸರು ಸೋನು ಮಲಿಕ್ ಮತ್ತು ಆಕೆಯ ಹೆಸರು ಅಂಜಲಿ. ನಮ್ಮನ್ನು ವಕೀಕಲರು ತಡೆದಿದ್ದಾರೆಂದು ಅಸಮಾಧಾನ ಹೊರ ಹಾಕಿದ್ದಾನೆ.
ಈ ಸುದ್ದಿಯನ್ನೂ ಓದಿ: ಮೊದಲು ಆರೋಗ್ಯ ಇಲಾಖಾ ಸಿಬ್ಬಂದಿಗೆ ಕೋವಿಡ್ ವ್ಯಾಕ್ಸಿನ್: ಕೇಂದ್ರ ಆರೋಗ್ಯ ಸಚಿವಾಲಯ
ಸದ್ಯ ಇಬ್ಬರನ್ನೂ ಬಂಧಿಸಲಾಗಿದೆ. ಇಬ್ಬರೂ ವಯಸ್ಕರಾಗಿದ್ದು, ಯುವತಿ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನೂ ಪೊಲೀಸ್ ಅಧಿಕಾರಿ ಅನಿಲ್ ಸಮನಿಸ್ ಮಾತನಾಡಿ, ತನಿಖೆ ನಡೆಯುತ್ತಿದೆ. ಯುವತಿಯ ಹೇಳಿಕೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.