ಅಯೋಧ್ಯೆ (ಉ.ಪ್ರ): ಕೊಪ್ಪಳ ಜಿಲ್ಲೆಯ ಕಿಷ್ಕಿಂಧೆ(ಅಂಜನಾದ್ರಿ ಬೆಟ್ಟ)ಯಲ್ಲಿ ವಿಶ್ವದ ಅತೀ ಎತ್ತರದ ಹನುಮನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಹನುಮಂತ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಗೋವಿಂದ ಆನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಮಾತನಾಡಿರುವ ಅವರು, 215 ಮೀಟರ್ ಎತ್ತರದ ಹನುಮಂತನ ಪ್ರತಿಮೆಯನ್ನು ಕಿಷ್ಕಿಂಧೆಯಲ್ಲಿ ನಿರ್ಮಿಸುವ ಯೋಜನೆ ರೂಪಿಸಲಾಗುವುದು. ಸುಮಾರು 1,200 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಮಾಡಲಾಗುವುದು ಎಂದಿದ್ದಾರೆ.
ಪ್ರತಿಮೆ ನಿರ್ಮಾಣಕ್ಕಾಗಿ ದೇಶಾದ್ಯಂತ ರಥಯಾತ್ರೆ ನಡೆಸಿ ಹಣ ಸಂಗ್ರಹಿಸಲಾಗುವುದು. ಈ ಹನುಮ ಪ್ರತಿಮೆ 215 ಮೀಟರ್ಗೆ ಸೀಮಿತಗೊಳಿಸಲು ಕಾರಣವಿದ್ದು, ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮನ ಪ್ರತಿಮೆ 221 ಮೀಟರ್ ಇದ್ದು, ರಾಮನ ವಿಗ್ರಹಕ್ಕಿಂತ ಹನುಮನ ವಿಗ್ರಹ ಎತ್ತರವಿರಬಾರದು ಎಂದು 215 ಮೀಟರ್ಗೆ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಹನುಮನ ಜನ್ಮಸ್ಥಳವೇ ಅಂಜನಾದ್ರಿ
ರಾಮಾಯಣದಲ್ಲಿ ಉಲ್ಲೇಖವಾಗಿರುವಂತೆ ಕಿಷ್ಕಿಂಧೆ ವಾನರ ಸಾಮ್ರಾಜ್ಯದ ದೊರೆ ಸುಗ್ರೀವನ ರಾಜಧಾನಿಯಾಗಿತ್ತು. ಇತಿಹಾಸದ ಪ್ರಕಾರ ಹನುಮಂತನ ತಾಯಿ ಅಂಜನಾದೇವಿ ಈ ಪರ್ವತದಲ್ಲಿ ಆಂಜನೇಯನಿಗೆ ಜನ್ಮ ನೀಡಿದ್ದಾಳೆ. ಅದರ ಕುರುಹಾಗಿ ಅಂಜನಾದಿ ಬೆಟ್ಟದಲ್ಲಿ ಅತ್ಯಂತ ಪ್ರಾಚೀನವಾದ ಆಂಜನೇಯ ಮಂದಿರವಿದೆ. ಆನೆಗೊಂದಿಯಿಂದ ಮುನಿರಾಬಾದ್ ಮಾರ್ಗದಲ್ಲಿ ಬರುವ ಈ ಪರ್ವತದಲ್ಲಿನ ಆಂಜನೆಯನನ್ನು ನೋಡಲು 610 ಮೆಟ್ಟಿಲುಗಳನ್ನು ಏರಿ ಹೋಗಬೇಕಿದೆ.
ಇನ್ನು ತಾಯಿಯು ಸ್ನಾನಕ್ಕೆ ನೀರಿಲ್ಲದೆ ಪರಿತಪಿಸುವಾಗ ಆಂಜನೇಯನು ಬೆಟ್ಟದ ಕೆಳಗೆ ಹರಿಯುತ್ತಿದ್ದ ತುಂಗಭದ್ರ ನದಿಯನ್ನು ಎರಡು ಭಾಗವನ್ನಾಗಿಸಿ ತುಂಗಭದ್ರೆಯ ಒಂದು ಭಾಗವನ್ನು ತಾನಿರುವ ಬೆಟ್ಟದ ಕಡೆಗೆ ಹರಿಸಿದ್ದಾನೆ ಎಂಬ ನಂಬಿಕೆ ಇದೆ.
ಈ ಹಿನ್ನೆಲೆ ನದಿ ಎರಡು ಭಾಗವಾಗಿ ಹರಿಯುವ ಸ್ಥಳಕ್ಕೆ ‘ಹನುಮನ ಸೆಳವು’ ಅಂತಲೂ ಕರೆಯಲಾಗುತ್ತದೆ.