ಮೆವತ್(ಹರಿಯಾಣ): ಅಕ್ಟೋಬರ್ 21ರಂದು ಹರಿಯಾಣದಲ್ಲಿ 90 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಆಡಳಿತ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಇದರ ಮಧ್ಯೆ ಲಂಡನ್ನಲ್ಲಿ ಪದವಿ ಪಡೆದುಕೊಂಡಿರುವ 27 ವರ್ಷದ ಯುವತಿಯನ್ನು ಬಿಜೆಪಿ ಕಣಕ್ಕಿಳಿಸಿದೆ.
ಹರಿಯಾಣದ ಮಿವಾತ್ ಜಿಲ್ಲೆಯ ಪುನ್ವಾನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ 27 ವರ್ಷದ ನೌಕ್ಷಮ್ ಚೌಧರಿ ಅಖಾಡಕ್ಕಿಳಿದಿದ್ದಾರೆ. ನೌಕ್ಷಮ್ ತಂದೆ ನಿವೃತ್ತ ನ್ಯಾಯಾಧೀಶರಾಗಿದ್ದು, ತಾಯಿ ಹರಿಯಾಣ ಸರ್ಕಾರದ ಕಂದಾಯ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೆವಾತ್ ಜಿಲ್ಲೆಯಲ್ಲಿ ಮುಸ್ಲಿಂ ಪ್ರಾಬಲ್ಯವಿದ್ದು, 5 ಲಕ್ಷ ಮುಸ್ಲಿಂ ಮತದಾರರಿದ್ದಾರೆ. ಶೇ.80ರಷ್ಟು ಮುಸ್ಲಿಂ ಮತದಾರರು ಹಾಗೂ ಶೇ.20ರಷ್ಟು ಹಿಂದೂ ಮತದಾರರು ಇಲ್ಲಿದ್ದಾರೆ. 2014ರ ಹರಿಯಾಣ ವಿಧಾನಸಭೆ ಚುನಾವಣೆ ವೇಳೆ ಈ ಕ್ಷೇತ್ರದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತ್ತು. ಇದೀಗ ಈ ಕ್ಷೇತ್ರದಿಂದ ನೌಕ್ಷಮ್ ಚೌಧರಿ ಕಣಕ್ಕಿಳಿದಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ನಿಂದ ಮೊಹಮ್ಮದ್ ಇಲಿಯಾಸ್ ಕಣಕ್ಕಿಳಿದಿದ್ದಾರೆ.
ಈಗಾಗಲೇ ನಾಮಪತ್ರ ಸಲ್ಲಿಸಿ ಮಾತನಾಡಿರುವ ನೌಕ್ಷಮ್, ಉತ್ತಮ ಶಿಕ್ಷಣ ಪಡೆದುಕೊಂಡಿದ್ದು ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಬಳಿಕ ನಿರುದ್ಯೋಗ ನಿವಾರಣೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.