ಕೇರಳ: ಭಾರತ ಸರ್ಕಾರ ಕೊರೊನಾ ಹರಡುವಿಕೆ ನಿಯಂತ್ರಣ ಮಾಡುವ ಉದ್ದೇಶದಿಂದ ದೇಶವನ್ನು ಬಂದ್ ಮಾಡಿದೆ. ಈ ಹಿನ್ನೆಲೆಯಲ್ಲಿ ದೇಶದ ಆಯಾ ರಾಜ್ಯಗಳ ಸರ್ಕಾರಗಳು ಬಿಗಿ ಕ್ರಮಗಳನ್ನು ಕೈಗೊಂಡಿವೆ. ಆದರೆ ಈ ರೀತಿಯ ಕಠಿಣ ಕ್ರಮಗಳು ಕೆಲವರ ಪಾಲಿಗೆ ತೀವ್ರ ಸ್ವರೂಪದ ಸಂಕಷ್ಟ ತಂದೊಡ್ಡುತ್ತಿವೆ.
ಕಣ್ಣೂರಿನಲ್ಲಿ ಹೀಗೊಂದು ಘಟನೆ ನಡೀತು..
ಇಲ್ಲಿನ ತಲಶೇರಿಯಲ್ಲಿ ರೋಗಿಯೊಬ್ಬರು ಡಯಾಲಿಸಿಸ್ ಮಾಡಿಸಿಕೊಂಡು ಹಿಂತಿರುಗುತ್ತಿದ್ದರು. ಈ ವೇಳೆ 28 ವರ್ಷದ ನಿಶಾಲ್ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ದ್ವಿಚಕ್ರ ವಾಹನದಲ್ಲಿದ್ದ ನಿಶಾಲ್ ತನ್ನ ಸಮಸ್ಯೆ ಹೇಳಿಕೊಳ್ಳುವ ಮೊದಲೇ ಪೊಲೀಸರು ತನ್ನ ಮೇಲೆ ಲಾಠಿ ಪ್ರಹಾರ ಮಾಡಿದ್ರು ಅನ್ನೋದು ಆತನ ದೂರು.
- " class="align-text-top noRightClick twitterSection" data="">
ಈತನ ಅಳಲೇನು?:
ನಾನು ಡಯಾಲಿಸಿಸ್ ಘಟಕದಿಂದ ಹಿಂತಿರುಗುತ್ತಿದ್ದೆ. ನನ್ನ ದ್ವಿಚಕ್ರ ವಾಹನವನ್ನು ಕೊಡುವಳ್ಳಿ ಬಳಿ ಪೊಲೀಸರು ತಡೆದರು. ನಂತರ ಎಲ್ಲಿಗೆ ಹೋಗಿದ್ದೆ ಎಂದು ಅವರು ನನ್ನ ಪ್ರಶ್ನಿಸಿದರು. ನಾನು ಡಯಾಲಿಸಿಸ್ ಘಟಕದಿಂದ ಹಿಂತಿರುಗುತ್ತಿದ್ದೇನೆ ಎಂದು ತಿಳಿಸಿದೆ. ಅಷ್ಟರಲ್ಲೇ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ನನ್ನ ಕೈ ಭಾಗ, ಬೆನ್ನಿಗೆಲ್ಲಾ ಹೊಡೆದರು. ಇದಾದ ನಂತರ ನಾನು ಪೊಲೀಸ್ ಠಾಣೆಯಿಂದ ತಂದ ಅನುಮತಿ ಪತ್ರ ತೋರಿಸಿದೆ. ಡಯಾಲಿಸಿಸ್ ಸಮಸ್ಯೆ ಬಗ್ಗೆ ಅವರಿಗೆ ತಿಳಿ ಹೇಳಿದೆ. ಅಷ್ಟರಲ್ಲೆ ನನಗೆ ಹಲ್ಲೆ ಮಾಡಿದ್ರು ಎಂದು ತನ್ನಅಸಹಾಯಕತೆ, ನೋವು ತೋಡಿಕೊಂಡಿದ್ದಾರೆ.
ಘಟನೆ ಸಂಬಂಧ ಮತ್ತೆ ತಲಶೇರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದಾಗ, ಆಸ್ಪತ್ರೆಗೆ ಟ್ಯಾಕ್ಸಿ ಮುಖಾಂತರ ಹೋಗಬೇಕಿತ್ತು ಎಂದು ಪೊಲೀಸರು ಹೇಳಿದ್ರು. ಇದಕ್ಕೆ ಪ್ರತ್ಯುತ್ತರ ನೀಡಿದ ನಿಶಾಲ್, ಡಯಾಲಿಸಿಸ್ ದುಬಾರಿಯಾದ ಕಾರಣಕ್ಕೆ, ಟ್ಯಾಕ್ಸಿಯಲ್ಲಿ ಹೋಗಲು ತನ್ನ ಬಳಿ ಹಣವಿಲ್ಲ. ಅಷ್ಟು ಆರ್ಥಿಕ ಸಾಮರ್ಥ್ಯವಿಲ್ಲ ಎಂದು ಹೇಳಿದ್ದಾರೆ.
ನಿಶಾಲ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, ತನ್ನ ಆರೋಗ್ಯ ಸಮಸ್ಯೆ ಬರೆದುಕೊಂಡಿದ್ದಾರೆ. 'ಗೌರವಾನ್ವಿತ ಮುಖ್ಯಂತ್ರಿಗಳೇ, ಲಾಕ್ಡೌನ್ ಹಿನ್ನೆಲೆ ಜನರು ಸ್ವಇಚ್ಚೆಯಿಂದ ಸಹಕರಿಸಿದ್ದಾರೆ. ಆದರೆ, ಕೆಲವು ಜನರು ತುರ್ತು ಅಗತ್ಯದ ಹಿನ್ನೆಲೆ ಹೊರಬರುತ್ತಿದ್ದಾರೆ. ಇವರ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಗಮನಹರಿಸಿ. ನಾನು ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದೇನೆ. ಡಯಾಲಿಸಿಸ್ ಮಾಡಿಸಿಕೊಂಡು ಹಿಂದಿರುಗುವಾಗ ನನ್ನ ಮೇಲೆ ಪೊಲೀಸರು ಕ್ರೂರವಾಗಿ ಥಳಿಸಿದ್ರು. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು, ನೀವು ನಮ್ಮ ಜೊತೆ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಘಟನೆಯ ಬಗ್ಗೆ ಸಿಎಂ ಪಿಣರಾಯಿ ವಿಜಯನ್, ಆರೋಗ್ಯ ಸಚಿವ ಕೆ.ಕೆ.ಶೈಲಜಾ ಮತ್ತು ಕಣ್ಣೂರು ಜಿಲ್ಲಾಧಿಕಾರಿ ಸುಭಾಷ್ ಅವರಿಗೆ ನಿಶಾಲ್ ದೂರು ಸಲ್ಲಿಸಿದ್ದಾರೆ. ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಜಿಲ್ಲಾಧಿಕಾರಿ ಸುಭಾಷ್ ಭರವಸೆ ಕೊಟ್ಟಿದ್ದಾರೆ.