ಕೋಲ್ಕತ್ತಾ: ಮೊಬೈಲ್ ಚಾರ್ಜರ್ನಿಂದ ಕತ್ತು ಹಿಸುಕಿ ಪತಿಯನ್ನು ಕೊಲೆ ಮಾಡಿದ್ದ ವಕೀಲೆ ಅನಿಂದಿತಾ ಪಾಲ್ಗೆ ಪಶ್ಚಿಮ ಬಂಗಾಳದ ಉತ್ತರ 24 ಪರಗಗಣ ಜಿಲ್ಲೆಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುಜಿತ್ ಕುಮಾರ್ ಝಾ, ಗಂಡನನ್ನು ಹತ್ಯೆ ಮಾಡಿದ ಪತ್ನಿಗೆ ಜೀವಾವಧಿ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿದ್ದಾರೆ.
ಸಾಕ್ಷ್ಯಾಧಾರಗಳ ನಾಪತ್ತೆ ಆರೋಪದಲ್ಲಿ ನ್ಯಾಯಾಲಯವು ಅಕೆಯನ್ನು ತಪ್ಪಿತಸ್ಥೆ ಎಂದು ಹೇಳಿದ್ದು, ಅದಕ್ಕಾಗಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಎರಡೂ ಶಿಕ್ಷೆಗಳು ಏಕಕಾಲದಲ್ಲಿ ಇರಲಿವೆ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
ಆಕೆಗೆ ಮೂರು ವರ್ಷದ ಮಗುವಿದ್ದು, ಈಗ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾಳೆ. ಪ್ರತ್ಯಕ್ಷ ಸಾಕ್ಷಿ ಇಲ್ಲದ ಕಾರಣ, ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಶಿಕ್ಷೆ ವಿಧಿಸಲಾಗಿದೆ.
2018ರ ನವೆಂಬರ್ 24 ಮತ್ತು 25 ರ ಮಧ್ಯರಾತ್ರಿ ಕೋಲ್ಕತ್ತಾದ ತಮ್ಮ ನ್ಯೂ ಟೌನ್ ಫ್ಲಾಟ್‌ನಲ್ಲಿ ಮೊಬೈಲ್ ಫೋನ್ ಚಾರ್ಜರ್‌ನ ತಂತಿಯಿಂದ ವಕೀಲ ಪತಿ ರಜತ್‌ನನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಆರೋಪಿಸಲಾಗಿತ್ತು.
ಅನಂದಿತಾ ತನ್ನ ಮಗನನ್ನು ಕೊಂದಿದ್ದಾಳೆ ಎಂದು ಆರೋಪಿಸಿ ರಜತ್ ತಂದೆ ಎಫ್ಐಆರ್ ದಾಖಲಿಸಿದ್ದರು ಮತ್ತು ವಿಚಾರಣೆಯ ನಂತರ ಆಕೆಯನ್ನು ನವೆಂಬರ್ 29ರಂದು ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ಮತ್ತು ವಾದಗಳು ಈ ವರ್ಷ ಮಾರ್ಚ್‌ನಲ್ಲಿ ಪೂರ್ಣಗೊಂಡಿವೆ. ಅನಿಂದಿತಾ ಮತ್ತು ರಜತ್ ಇಬ್ಬರೂ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ವೃತ್ತಿ ಮಾಡುತ್ತಿದ್ದರು.