ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ವಾಸಿಸುತ್ತಿದ್ದ ಮೂರು ಅಂತಸ್ತುಗಳ "ವೇದ ನಿಲಯಂ" ಭವ್ಯ ಬಂಗಲೆಯನ್ನು ಸ್ಮಾರಕವನ್ನಾಗಿಸಲು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ.
ಚೆನ್ನೈನ ಪ್ರತಿಷ್ಠಿತ ಬಡಾವಣೆ ಪೋಯೆಸ್ ಗಾರ್ಡನ್ನಲ್ಲಿರುವ ಜಯಲಲಿತಾ ಆಸ್ತಿಯನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಅಧಿಸೂಚನೆಯನ್ನು ಚೆನ್ನೈ ಕಲೆಕ್ಟರ್ ಜಾರಿಗೊಳಿಸಿದ್ದಾರೆ. ಸ್ಮಾರಕ ನಿರ್ಮಾಣದ ಯೋಜನೆಯ ಕಾರಣದಿಂದ ಯಾವುದೇ ವ್ಯಕ್ತಿಗಳನ್ನು ಸ್ಥಳಾಂತರ ಮಾಡುವ ಅವಶ್ಯಕತೆ ಇರುವುದಿಲ್ಲ ಹಾಗೂ ಬಂಗಲೆಯ ಅಧಿಕೃತ ವಾರಸುದಾರರನ್ನು ಇನ್ನಷ್ಟೇ ಗುರುತಿಸಬೇಕಿದೆ ಎಂದು ಕಲೆಕ್ಟರ್ ತಿಳಿಸಿದ್ದಾರೆ.
ವೇದ ನಿಲಯಂನಲ್ಲಿ ಜಯಲಲಿತಾ ಸುಮಾರು 30 ವರ್ಷಗಳ ಕಾಲ ವಾಸವಾಗಿದ್ದರು. ಹೀಗಾಗಿ ಜನತೆಯ ಭಾವನೆಗಳನ್ನು ಗೌರವಿಸಿ ಇದೇ ಕಟ್ಟಡವನ್ನು ಸ್ಮಾರಕವಾಗಿಸಲಾಗುತ್ತಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮರಿನಾ ಪ್ರದೇಶದಲ್ಲಿರುವ ಜಯಲಲಿತಾ ಸಮಾಧಿ ಸ್ಥಳದಲ್ಲಿ 50 ಕೋಟಿ ರೂ. ವೆಚ್ಚದ ಫೀನಿಕ್ಸ್ ಥೀಮ್ ಮಾದರಿಯ ಭವ್ಯ ಸ್ಮಾರಕ ನಿರ್ಮಾಣ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ.