ಇಂದೋರ್: ಮಧ್ಯಪ್ರದೇಶದ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಕೂಲಿ ಕಾರ್ಮಿಕನ ಮಗಳು ಫುಟ್ಪಾತ್ನಲ್ಲಿ ಜೀವನ ನಡೆಸುತ್ತಲೇ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದು. ಇದೀಗ ಆಕೆಗೆ ಇಂದೋರ್ ಮುನ್ಸಿಪಲ್ ಕಾರ್ಪೋರೇಷನ್ ಗಿಫ್ಟ್ ಆಗಿ ಪ್ಲಾಟ್ ನೀಡಿದೆ.
10ನೇ ತರಗತಿ ಪರೀಕ್ಷೆಯಲ್ಲಿ ಶೇ.68ರಷ್ಟು ಫಲಿತಾಂಶ ಪಡೆದುಕೊಂಡಿರುವ ಭಾರ್ತಿ ಖಾಂಡೇಕರ್ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಫುಟ್ಪಾತ್ನಲ್ಲಿ ವಾಸ ಮಾಡುತ್ತಲೇ ಈ ಸಾಧನೆ ಮಾಡಿದ್ದಾಳೆ. ಇದೀಗ ಐಎಎಸ್ ಮಾಡುವ ಕನಸು ಕಾಣುತ್ತಿರುವ ಬಾಲಕಿಗೆ ಆಸರೆ ಒದಗಿಸುವ ಮೂಲಕ ಮುನ್ಸಿಪಲ್ ಕಾರ್ಪೋರೇಷನ್ ಸಹಾಯ ಮಾಡಿದೆ.
ದಶರತ್ ಖಾಂಡೇಕರ್ ನಿತ್ಯ ಕೂಲಿ ಕೆಲಸ ಮಾಡಿ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದು, ಅವರು ಶಾಲೆ ಮೆಟ್ಟಿಲು ಹತ್ತಿಲ್ಲ. ಆದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮೂವರು ಮಕ್ಕಳಿಗೂ ಶಾಲೆಗೆ ಕಳುಹಿಸುತ್ತಿದ್ದಾರೆ.
ಇದೇ ವಿಷಯವಾಗಿ ಮಾತನಾಡಿರುವ ಭಾರ್ತಿ, ತನ್ನ ಯಶಸ್ಸಿಗೆ ತನ್ನ ಕುಟುಂಬದ ಎಲ್ಲ ಸದಸ್ಯರು ಕಾರಣ ಎಂದು ಹೇಳಿದ್ದಾಳೆ. ಜತೆಗೆ ಶಿಕ್ಷಕರ ಸಹಾಯ ಕೂಡ ಇದರಲ್ಲಿ ಅಡಗಿದೆ ಎಂದಿದ್ದಾಳೆ. ನಾನು ಫುಟ್ಪಾತ್ನಲ್ಲಿ ಹುಟ್ಟಿ, ಅಲ್ಲೇ ಅಭ್ಯಾಸ ಮಾಡಿದ್ದೇನೆ. ವಾಸ ಮಾಡಲು ಮನೆ ಇಲ್ಲ. ಇದೀಗ ಮನೆ ನೀಡಿರುವ ಮುನ್ಸಿಪಲ್ಗೆ ಧನ್ಯವಾದಗಳು ಎಂದಿರುವ ಬಾಲಕಿ, ಅಭ್ಯಾಸದ ಬಗ್ಗೆ ಮತ್ತಷ್ಟು ಗಮನ ಹರಿಸಿ, ಸರ್ಕಾರಿ ಅಧಿಕಾರಿಯಾಗುವುದಾಗಿ ತಿಳಿಸಿದ್ದಾಳೆ.