ಉತ್ತರಾಖಂಡ್ : ಮಹಾ ಕುಂಭಮೇಳವು ವಿಶ್ವದ ಬೃಹತ್ ಧಾರ್ಮಿಕ ಸಮಾಗಮ ಎಂದೇ ಖ್ಯಾತಿಯಾಗಿದೆ. ಇದು ಜಗತ್ತಿನ ಅತಿದೊಡ್ಡ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾಗಿದೆ. ಹಿಂದೂ ಧರ್ಮದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರೂ ಈ ಮಹಾಮೇಳದಲ್ಲಿ ಭಾಗಿಯಾಗಲು ಬಯಸುತ್ತಾರೆ.
ಆದರೆ, ಕೊರೊನಾದಿಂದ ಈ ಬಾರಿ ಎಲ್ಲರೂ ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಾಂತಿಕುಂಜದ ಗಾಯತ್ರಿ ಪರಿವಾರ ಆಶ್ರಮವು 'ನಿಮ್ಮ ಮನೆಗೆ ಹರಿದ್ವಾರ' ಎಂಬ ಅಭಿಯಾನ ಪ್ರಾರಂಭಿಸಿದೆ. ಹರಿದ್ವಾರದಲ್ಲಿ ಕುಂಭಮೇಳ ನಡೆಯುತ್ತಿದ್ದರೆ, ಇತ್ತ ಹರಿದ್ವಾರವೇ ನಿಮ್ಮ ಮನೆ ಬಾಗಿಲಿಗೆ ಬರಲಿದೆ.
ಕುಂಭ ಮೇಳದ ಇತಿಹಾಸದಲ್ಲಿ ಈ ರೀತಿಯ ಅಭಿಯಾನವು ಮೊದಲ ಬಾರಿಗೆ ನಡೆಯುತ್ತಿದೆ. ಗಂಗಾ ನೀರು, ವೇದ ಮಾತಾ ಗಾಯತ್ರಿ ಅವರ ಚಿತ್ರ ಮತ್ತು ಯುಗ ಸಾಹಿತ್ಯವನ್ನು 10 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕಳುಹಿಸುವ ಉದ್ದೇಶ ಹೊಂದಲಾಗಿದೆ.
ಹಳ್ಳಿಯ ಜನರಿಗಾಗಿ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ. ಗಂಗಾ ಜಲವನ್ನು ಜನರಿಗೆ ತಲುಪಿಸುವುದರ ಜೊತೆಗೆ ಕುಂಭದ ವಾಸ್ತವತೆ, ಸ್ಫೂರ್ತಿ ಮತ್ತು ವೈಜ್ಞಾನಿಕತೆಯ ಬಗ್ಗೆ ಯುವಕರಿಗೆ ತಿಳಿಸಿ ಕೊಡುವ ಉದ್ದೇಶ ಹೊಂದಲಾಗಿದೆ.
ಇನ್ನು, ಗಾಯತ್ರಿ ಪರಿವಾರವು ಸ್ಥಾಪನೆಯಾಗಿ 50 ವರ್ಷ ಪೂರ್ಣಗೊಳ್ಳುತ್ತಿದೆ. ಮಹಾಕುಂಭದ ಜೊತೆಗೆ ಗಾಯತ್ರಿ ಪರಿವಾರದ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಭಾಗಿಯಾಗಲು ಲಕ್ಷಾಂತರ ಜನರು ಬಯಸುತ್ತಾರೆ.
ಆದರೆ, ಕೊರೊನಾದಿಂದ ಇದು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಮನೆಗೆ ಹರಿದ್ವಾರ ಕಾರ್ಯಕ್ರಮವು ಭಕ್ತರಿಗೆ ಕುಂಭಮೇಳದ ಅನುಭವ ನೀಡಲಿದೆ.