ತಿರುವನಂತಪುರಂ: ಮುಂಬರುವ ಶಬರಿಮಲೆ ಯಾತ್ರೆಗೆ (ಮಕರಜ್ಯೋತಿ ತೀರ್ಥಯಾತ್ರೆ) ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಕಡಿಮೆ ಸಂಖ್ಯೆಯಲ್ಲಿ ಭಕ್ತರು, ಯಾತ್ರಾರ್ಥಿಗಳಿಗೆ ಅವಕಾಶ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.
ನವೆಂಬರ್ 15 ರಿಂದ ಜನವರಿ 20ರ ವರೆಗೆ ಶಬರಿಮಲೆ ತೀರ್ಥಯಾತ್ರೆ ನಡೆಯಲಿದೆ. ಆದರೆ ಈ ಬಾರಿ ಕೊರೊನಾ ಭೀತಿ ಇರುವುದರಿಂದ ಸೀಮಿತ ಸಂಖ್ಯೆಯ ಯಾತ್ರಾರ್ಥಿಗಳೊಂದಿಗೆ ಆಚರಣೆಗಳನ್ನು ನಡೆಸಲಾಗುವುದು ಮತ್ತು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ರಾಜ್ಯದ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮುಖ್ಯಸ್ಥರು, ಗೃಹ ಇಲಾಖೆ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಂಡಳಿ, ಅರಣ್ಯ ಮತ್ತು ಆರೋಗ್ಯ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಯು ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲಿದೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಮತ್ತು ಪಾಂಡಿಚೆರಿ ರಾಜ್ಯಗಳಿಂದ ಪ್ರತಿ ದಿನಕ್ಕೆ ಎಷ್ಟು ಯಾತ್ರಾರ್ಥಿಗಳು ಬರಬೇಕೆಂಬುದರ ಕುರಿತು ತಿಳಿಸಲಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಈ ಬಾರಿಯ ನಿಯಮಗಳು ಹೀಗಿವೆ:
- ಯಾತ್ರಾರ್ಥಿಗಳು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಅದೇ ದಿನ ಹಿಂದಿರುಗಬೇಕು
- ಅವರಿಗೆ ಅಲ್ಲಿಯೇ ಉಳಿಯುವ ವ್ಯವಸ್ಥೆ ಈ ಬಾರಿ ಇರುವುದಿಲ್ಲ
- ಕೆಲ ಭಕ್ತರಿಗೆ ಮಾತ್ರ ಪೇಪರ್ ತಟ್ಟೆಗಳಲ್ಲಿ ಅನ್ನದಾನದ ವ್ಯವಸ್ಥೆ ಇರುತ್ತದೆ
- ದೇವಾಲಯ ಮಂಡಳಿ ಗೊತ್ತುಪಡಿಸಿದ ಸ್ಥಳದಲ್ಲಿ ಅಭಿಷೇಕಕ್ಕಾಗಿ ತುಪ್ಪ ಸಂಗ್ರಹಿಸಲು ವಿಶೇಷ ವ್ಯವಸ್ಥೆ ಮಾಡಲಾಗುವುದು
- ಭಕ್ತರು ಬೆಟ್ಟವನ್ನು ಏರುವಾಗ ಮಾಸ್ಕ್ ಕಡ್ಡಾಯ
- ಪಂಪಾ ನದಿಯಲ್ಲಿ ಸ್ನಾನ ಮಾಡಲು ಅವಕಾಶವಿಲ್ಲ, ಸ್ನಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು
- ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವಿಶೇಷ ಸೇವೆಗಳನ್ನು ನೀಡಲಿದೆ
- ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳನ್ನು ನಿಯೋಜಿಸಲಿದೆ