ಲಾಕ್ಡೌನ್ ಆರಂಭವಾದಾಗಿನಿಂದ ದೇಶದಲ್ಲಿ ಸೆಲೂನ್ಗಳು ಕೂಡಾ ಬಂದ್ ಆಗಿರುವುದು ತಿಳಿದ ವಿಚಾರ. ಬಹಳಷ್ಟು ದಿನಗಳಿಂದ ಗಡ್ಡ ಹಾಗೂ ತಲೆಗೂದಲು ಕತ್ತರಿಸಬೇಕು ಎಂದುಕೊಂಡವರಿಗೆ ಇದು ದೊಡ್ಡ ತಲೆನೋವಾಗಿದೆ. ಆದರೆ ಕೆಲವರಂತೂ ಸೆಲೂನ್ಗಾಗಿ ಕಾಯದೆ ಮನೆಯವರ ಬಳಿಯೇ ಅಥವಾ ತಾವೇ ಸ್ವತ: ಹೇರ್ ಕಟ್ ಮಾಡಿಕೊಳ್ಳುತ್ತಿದ್ಧಾರೆ.
ಇನ್ನು ಕೆಲವು ರಾಜಕಾರಣಿಗಳು ತಮ್ಮ ಹೇರ್ಸ್ಟೈಲ್, ಗಡ್ಡ ಹಾಗೂ ಮೀಸೆಯಿಂದಲೇ ತಮ್ಮನ್ನು ಗುರುತಿಸಿಕೊಂಡಿರುತ್ತಾರೆ. ಒಮ್ಮೆ ಮತದಾರರು ನಮ್ಮನ್ನು ಗುರುತಿಸಿದ ನಂತರ ಮತ್ತೆ ತಮ್ಮ ಗುರುತು ಬದಲಾದರೆ ಜನರು ನಮ್ಮನ್ನು ಸುಲಭವಾಗಿ ಮರೆತುಬಿಡುತ್ತಾರೆ ಎಂಬ ಕಾರಣಕ್ಕೆ ಎಷ್ಟು ವರ್ಷಗಳಾದರೂ ಅವರ ಸ್ಟೈಲ್ ಬದಲಿಸುವ ಸಾಹಸ ಮಾಡುವುದಿಲ್ಲ. ಆದರೆ ಇಲ್ಲೊಬ್ಬರು ರಾಜಕಾರಣಿ ತಾವು ಸುಮಾರು 40 ವರ್ಷಗಳಿಂದಲೂ ಬಿಟ್ಟಿದ್ದ ಗಡ್ಡ ಹಾಗೂ ಮೀಸೆಯನ್ನು ತೆಗೆದಿದ್ದಾರೆ.
ಕೇರಳದ ತಿರುವಳ್ಳದ ಶಾಸಕ ಮ್ಯಾಥ್ಯೂ ಟಿ. ಥಾಮಸ್ ಎಂಬುವವರೇ 40 ವರ್ಷಗಳಿಂದ ಬಿಟ್ಟಿದ್ದ ಗಡ್ಡ ಹಾಗೂ ಮೀಸೆಯನ್ನು ತೆಗೆಸಿದವರು. ಇವರನ್ನು ನೋಡಿದರೆ ತಕ್ಷಣವೇ ಇವರೇನಾ ಮ್ಯಾಥ್ಯೂ ಟಿ. ಥಾಮಸ್ ಎಂದು ಗುರುತು ಹಿಡಿಯಲಾಗದಷ್ಟು ಬದಲಾಗಿದ್ದಾರೆ. ಥಾಮಸ್ ಅವರ ಕಾಲೇಜು ದಿನಗಳಲ್ಲಿ ಅಂದಿನ ಸಮಾಜವಾದಿ ಜನತಾ ಪಕ್ಷದ ಅಧ್ಯಕ್ಷರೂ ಆಗಿದ್ದ ಮಾಜಿ ಪ್ರಧಾನಿ ಚಂದ್ರಶೇಖರ್ ಅವರಿಂದ ಸ್ಪೂರ್ತಿಗೊಂಡು ಥಾಮಸ್ ಕೂಡಾ ಅವರಂತೆ ಗಡ್ಡ ಹಾಗೂ ಮೀಸೆ ಬಿಡಲು ಆರಂಭಿಸಿದರಂತೆ. ಕ್ರಮೇಣ ಜನರು ಅವರನ್ನು ಗಡ್ಡ, ಮೀಸೆಯಿಂದಲೇ ಗುರುತಿಸಲು ಆರಂಭಿಸಿದ್ದರಿಂದ ಅದೇ ಸ್ಟೈಲ್ ಮುಂದುವರೆಸಿದ್ದಾರೆ.
ಇನ್ನು 40 ವರ್ಷಗಳಿಂದ ಬಿಟ್ಟಿದ್ದ ಗಡ್ಡ, ಮೀಸೆಯನ್ನು ಮ್ಯಾಥ್ಯೂ ಥಾಮಸ್ ಇದ್ದಕ್ಕಿದ್ದಂತೆ ಏಕೆ ತೆಗೆಸಿದರು ಎಂಬುದಕ್ಕೆ ಕೂಡಾ ಬಲವಾದ ಕಾರಣವಿದೆ. 'ಸದ್ಯಕ್ಕೆ ಎಲ್ಲೆಡೆ ಕೊರೊನಾ ವೈರಸ್ ಭೀತಿ ಇದ್ದು ಒಬ್ಬ ಶಾಸಕನಾಗಿ ಜನರ ಕಷ್ಟ-ಸುಖ ತಿಳಿಯಲು ನಾನು ಹೊರಗೆ ಹೋಗುತ್ತಿರುತ್ತೇನೆ. ಅಲ್ಲಿ ಪ್ರತಿನಿತ್ಯ ನೂರಾರು ಜನರನ್ನು ಭೇಟಿಯಾಗುತ್ತಿರುತ್ತೇನೆ. ಆದರೆ ಉದ್ದ ಗಡ್ಡದಿಂದಲೂ ಸುಲಭವಾಗಿ ಕೊರೊನಾ ವೈರಸ್ ಅಟ್ಯಾಕ್ ಆಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ನನಗೆ ಎಚ್ಚರಿಕೆ ನೀಡಿದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ 40 ವರ್ಷಗಳ ಲುಕ್ ಬದಲಿಸಲು ನಿರ್ಧರಿಸಿದೆ' ಎಂದು ಶಾಸಕ ಮ್ಯಾಥ್ಯೂ ಟಿ. ಥಾಮಸ್ ಹೇಳಿದ್ದಾರೆ.
ಈ ಹೊಸ ಲುಕ್ನಲ್ಲಿ ಮೊದಲ ಬಾರಿಗೆ ಹೊರ ಹೋದ ನಂತರ ಸೆಕ್ಯೂರಿಟಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಕೂಡಾ ನನ್ನನ್ನು ನೋಡಿ ಒಂದು ಕ್ಷಣ ಕನ್ಫ್ಯೂಸ್ ಆದರು ಎನ್ನುತ್ತಾರೆ ಶಾಸಕ ಥಾಮಸ್. ಗಡ್ಡ, ಮೀಸೆ ತೆಗೆಸಿದರೆ ಏನಂತೆ, ಜನ ಮೆಚ್ಚುವ ಕಾರ್ಯಗಳನ್ನು ಮಾಡಿ ಜನರಿಗೆ ಹತ್ತಿರವಾಗುವುದು ಮುಖ್ಯ ಏನಂತೀರಾ...?