ನವದೆಹಲಿ: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ಡೌನ್ನಲ್ಲಿದ್ದು ಮನೆಗಳಲ್ಲಿ ಸಿಲುಕಿರುವ ಕೇಂದ್ರೀಯ ವಿದ್ಯಾಲಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್ ತರಗತಿ ನಡೆಸಲು ಪ್ರೋಟೋಕಾಲ್ ಸಿದ್ದಪಡಿಸಿದ್ದು ಎಲ್ಲಾ ಪ್ರಾಂಶುಪಾಲರೊಂದಿಗೆ "ಆ್ಯಕ್ಷನ್ ಪಾಯಿಂಟ್‌ಗಳನ್ನು" ಹಂಚಿಕೊಳ್ಳಲಾಗಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿ ಭಾನುವಾರ ತಿಳಿಸಿದ್ದಾರೆ.
ಎಲ್ಲಾ ಕೇಂದ್ರೀಯ ವಿದ್ಯಾಲಯದ ವಾಟ್ಸಪ್,ಇ-ಮೇಲ್ ಮತ್ತು ಎಸ್ಎಂಎಸ್ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರನ್ನು ಸಂಪರ್ಕದಲ್ಲಿರಲು ತಿಳಿಸಲಾಗಿದ್ದು, ಇದರಿಂದ ಗರಿಷ್ಠ ಲಾಭ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಕೆಲವು ಆ್ಯಕ್ಷನ್ ಪಾಯಿಂಟ್‌ಗಳನ್ನು ಎಲ್ಲಾ ಪ್ರಾಂಶುಪಾಲರಿಗೆ ಕಳುಹಿಸಿದ್ದೇವೆ. ನಮ್ಮ ಶಿಕ್ಷಕರು ಆನ್‌ಲೈನ್ ತರಗತಿಗಳನ್ನು ನಡೆಸಲು ಅಗತ್ಯವಾದ ಪ್ರೋಟೋಕಾಲ್ ಅನ್ನು ಸಹ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದರ ಜೊತೆಗ ಸ್ವಯಂ ಪ್ರಭ ಪೋರ್ಟಾಲ್ ಮೂಲಕ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಲರ್ನಿಂಗ್‌ನ ರೆಕಾರ್ಡ್ ಮತ್ತು ಲೈವ್ ಕಾರ್ಯಕ್ರಮಗಳ ಪಾಠಗಳ ವೇಳಾಪಟ್ಟಿಯನ್ನು ನಾವು ಈಗಾಗಲೇ ಹಂಚಿಕೊಂಡಿದ್ದೇವೆ.
ಮಾನವ ಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ಈ ಕೇಂದ್ರಿಯ ವಿದ್ಯಾಲಯದಲ್ಲಿ ಸ್ಕೈಪ್, ಆನ್‌ಲೈನ್ ಸೆಸನ್ ಹಾಗೂ ವಿಡಿಯೋ ಚಾಟ್ಗಳನ್ನು ನಡೆಸುವ ಶಿಕ್ಷಕರನ್ನು ಎನ್ಐಒಎಸ್ ನಡೆಸಿದ ನೇರ ಸಂದರ್ಶನದಲ್ಲಿ ಆಯ್ಕೆ ಮಾಡಲಾಗಿದೆ.
ಹೀಗೆ ಆಯ್ಕೆಯಾದ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಗತ್ಯವಾದ ನೋಟ್ಸ್ ಹಾಗೂ ಇನ್ನಿತರ ಪಠ್ಯಕ್ಕೆ ಸಂಬಂಧಿಸಿದ ಪರಿಕರಗಳನ್ನು ತಯಾರಿಸಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಬರುವ ಅನುಮಾನಗಳನ್ನು ಲೈವ್ ಚಾಟ್ನಲ್ಲಿ ಸ್ಪಷ್ಟಪಡಿಸಬೇಕಾಗುತ್ತದೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ಲೈವ್ ಚಾಟ್ ವೇಳೆ ಯಾವುದೇ ಅನುಮಾನಗಳು ಬಾರದಿದ್ದರೆ ವಿಷಯಗಳನ್ನು ಮತ್ತೊಮ್ಮೆ ಪಿಪಿಟಿಗಳ ಮೂಲಕ ಸೂಕ್ತವಾದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮನವರಿಗೆ ಮಾಡುವ ಜವಾಬ್ದಾರಿಯನ್ನು ಕೊಡಲಾಗಿದೆ ಎಂದು ಕೇಂದ್ರೀಯ ವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.