ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಕಾರಣದಿಂದಾಗಿ ಮಾರ್ಚ್ 22ರಿಂದ ಸ್ಥಗಿತಗೊಂಡಿದ್ದ ಮೆಟ್ರೋ ಸೇವೆಗಳನ್ನು ಪುನಾರಂಭಿಸುವಂತೆ ದೆಹಲಿ ಸರ್ಕಾರ, ಕೇಂದ್ರವನ್ನು ಒತ್ತಾಯಿಸಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 'ದೆಹಲಿಯಲ್ಲಿ ಮೆಟ್ರೋ ಸೇವೆಗಳನ್ನು ಪುನಾರಂಭಿಸಬೇಕೆಂದು ನಾವು ಬಯಸುತ್ತೇವೆ. ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಸೇವೆಗಳನ್ನು ಪ್ರಾರಂಭಿಸಲು ನಾವು ಬಯಸುವುದಿಲ್ಲ. ಆದರೆ ಹಂತ ಹಂತವಾಗಿ ದೆಹಲಿಯಲ್ಲಿ ಪುನಾರಂಭಿಸಬೇಕು' ಎಂದು ಹೇಳಿದ್ದಾರೆ.
'ಕೇಂದ್ರ ಸರ್ಕಾರ ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಇದರಿಂದ ಜನರಿಗೆ ಪರಿಹಾರ ಸಿಗುತ್ತದೆ. ನಾವು ಈ ವಿಷಯವನ್ನು ಹಲವಾರು ಬಾರಿ ಕೇಂದ್ರದೊಂದಿಗೆ ಪ್ರಸ್ತಾಪಿಸಿದ್ದೇವೆ' ಎಂದು ಸಭೆಯಲ್ಲಿ ತಿಳಿಸಿದ್ದಾರೆ.
ಕೆಟ್ಟ ಪರಿಣಾಮಕ್ಕೊಳಗಾದ ಆರ್ಥಿಕ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬುದರ ಕುರಿತು ದೆಹಲಿ ಸರ್ಕಾರವು ವ್ಯಾಪಾರಿಗಳಿಂದ ಸಲಹೆಗಳನ್ನು ಕೋರಿದೆ.
'ಈ ಸಮಯದಲ್ಲಿ ಆರ್ಥಿಕತೆಯು ತುಂಬಾ ಕೆಟ್ಟ ಸ್ಥಿತಿಯಲ್ಲಿದೆ ಎಂದು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನೀವೆಲ್ಲರೂ ಬಹಳ ಕಷ್ಟದ ಹಂತವನ್ನು ಎದುರಿಸುತ್ತಿದ್ದೀರಿ. ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.
ತಮ್ಮ ಸರ್ಕಾರದ ಹಿಂದಿನ ಸಾಧನೆಗಳನ್ನು ಉಲ್ಲೇಖಿಸಿ, ದೆಹಲಿಯ ಜನರು ಒಟ್ಟಾಗಿ ಕಳೆದ ಐದು ವರ್ಷಗಳಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಹೇಳಿದ ಕೇಜ್ರಿವಾಲ್, 'ನಾವು ಒಟ್ಟಾಗಿ ಆರ್ಥಿಕತೆಯನ್ನು ಸರಿಪಡಿಸುತ್ತೇವೆ ಎಂದು ನಿಮ್ಮೆಲ್ಲರಿಗೂ ಭರವಸೆ ನೀಡಲು ನಾನು ಬಯಸುತ್ತೇನೆ' ಎಂದಿದ್ದಾರೆ.