ನವದೆಹಲಿ : ಬೆಳೆ ನಾಶಪಡಿಸುವ ಮಿಡತೆಗಳ ಹಿಂಡುಗಳು ಇಂದು ದೆಹಲಿಯ ಹೊರವಲಯದಲ್ಲಿ ಕಾಣಿಸಿವೆ. ಅವುಗಳನ್ನು ಬೇರೆಡೆಗೆ ತಿರುಗಿಸಲು ಸಾಧ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಜನರು ತಮ್ಮ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಡಲು ಮತ್ತು ಮನೆಯ ಮುಂದೆ ಇರುವ ಸಸ್ಯಗಳನ್ನು ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚುವಂತೆ ನಿರ್ದೇಶಿಸಲಾಗಿದೆ. ಜಿಲ್ಲಾಧಿಕಾರಿಗಳು ಕೂಡ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ. ಮಿಡತೆಗಳ ಗಮನ ಬೇರೆಡೆ ಸೆಳೆಯಲು ನಿವಾಸಿಗಳಿಗೆ ಮಾರ್ಗದರ್ಶನ ನೀಡುವುದಕ್ಕಾಗಿ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಎ ಪಿ ಸೈನಿ ತಿಳಿಸಿದ್ದಾರೆ.
ಡ್ರಮ್ ಅಥವಾ ಪಾತ್ರೆಗಳನ್ನು ಬಡಿಯುವುದು, ಮ್ಯೂಸಿಕ್ ಸಿಸ್ಟಮ್ಗಳ ಮೂಲಕ ಹೆಚ್ಚು ಶಬ್ಧ ಬರುವಂತೆ ಹಾಡುಗಳನ್ನು ಹಾಕುವುದು. ಪಟಾಕಿಗಳನ್ನು ಸಿಡಿಸುವುದು ಮತ್ತು ಬೇವಿನ ಎಲೆಗಳನ್ನು ಸುಡುವುದು, ಹೆಚ್ಚಿನ ಡೆಸಿಬಲ್ ಶಬ್ಧ ಮಾಡುವ ಮೂಲಕ ಅವುಗಳನ್ನು ವಿಚಲಿತಗೊಳಿಸಬಹುದು ಎಂದು ಸರ್ಕಾರ ಹೇಳಿದೆ. ಕಳೆದ ಕೆಲವು ತಿಂಗಳುಗಳಿಂದ ಮಿಡತೆ ಹಿಂಡುಗಳು ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸೇರಿ ವಿವಿಧ ರಾಜ್ಯಗಳಲ್ಲಿನ ಬೆಳೆಗಳ ಮೇಲೆ ದಾಳಿ ನಡೆಸಿ ನಾಶಪಡಿಸಿವೆ.