ಕೇರಳ/ಕಾಸರಗೋಡು: ಕಾಸರಗೋಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಕೊರೊನಾ ರೋಗಿಗಳ ಪೈಕಿ 89 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದಾರೆ. ಉಳಿದ 12 ಜನ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಸರಗೋಡು ಜಿಲ್ಲೆಯೊಂದರಲ್ಲೇ ಈವರೆಗೆ ಸುಮಾರು 175 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು. ಎಲ್ಲರಿಗೂ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ದುಬೈನಿಂದ ವಾಪಸ್ಸಾಗಿದ್ದ ಕೇರಳದ ಅನಂಕುರ್ ಮೂಲದ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ಸೋಂಕಿನಿಂದ ಕಳೆದ 27 ದಿನಗಳಿಂದ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಇದೀಗ ಅವರು ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆ ಸಿಬ್ಬಂದಿ ಹೂವು ನೀಡಿ ಅವರನ್ನು ಆಸ್ಪತ್ರೆಯಿಂದ ಬೀಳ್ಕೊಟ್ಟಿದ್ದಾರೆ.
ಇನ್ನು ಕಾಸರಗೋಡಿನ ಒಟ್ಟು ಕೊರೊನಾ ಕೇಸ್ಗಳಲ್ಲಿ ಇದೀಗ 12 ಜನ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರೆಲ್ಲಾ ಗುಣಮುಖರಾಗಿದ್ದಾರೆ. 12 ಜನರಲ್ಲಿ 7 ಮಂದಿ ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ವಾಪಸ್ ಬಂದವರು ಎನ್ನಲಾಗಿದೆ. ಉಳಿದ 5 ಜನ ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವವರು.
ಈ ಕುರಿತು ಸುದ್ದಿಗೋಷ್ಟಿ ನಡೆಸಿ ಕೇರಳ ಸಿಎಂ ಪಿಣರಾಯಿ ವಿಜಯನ್, ಆಸ್ಪತ್ರೆಯ ವೈದ್ಯರು, ನರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇನ್ನು ಸುಮಾರು 4,112 ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು,ಅದರಲ್ಲಿ 3,104 ಜನರಿಗೆ ನೆಗೆಟಿವ್ ಬಂದಿದೆ. ಉಳಿದ 833 ಮಂದಿಯ ಲ್ಯಾಬ್ ರಿಪೋರ್ಟ್ ಬರುವುದು ಬಾಕಿ ಇದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.