ನವದೆಹಲಿ: ಭಾರಿ ಕುತೂಹಲ ಮೂಡಿಸಿರುವ 17 ಮಂದಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಅಂತಿಮ ಹಂತ ತಲುಪಿದ್ದು ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ.
ಶಾಸಕರ ರಾಜೀನಾಮೆಯಿಂದ ತೆರವಾದ 17 ಕ್ಷೇತ್ರಗಳ ಪೈಕಿ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಎಲೆಕ್ಷನ್ ನಡೆಯಲಿದೆ. ಈ ಉಪಚುನಾವಣೆಯಲ್ಲಿ ಅನರ್ಹರು ಸ್ಪರ್ಧಿಸುವ ಬಗ್ಗೆ ಸುಪ್ರೀಂಕೋರ್ಟ್ ನಿರ್ಧರಿಸಲಿದೆ.
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ತಿರುಗಿ ಬಿದ್ದು ಸರ್ಕಾರದ ಪತನಕ್ಕೆ ಕಾರಣವಾದ ಕಾಂಗ್ರೆಸ್‌ನ 13, ಜೆಡಿಎಸ್ನ 3 ಹಾಗೂ ಓರ್ವ ಪಕ್ಷೇತರ ಶಾಸಕರನ್ನು ಈ ಹಿಂದಿನ ವಿಧಾನಸಭೆಯ ಸ್ಪೀಕರ್ ಕೆ. ಆರ್. ರಮೇಶ್ಕುಮಾರ್ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು. ಹೀಗಾಗಿ ಈ ಶಾಸಕರು ಪ್ರಸಕ್ತ ವಿಧಾನಸಭೆ ಅವಧಿ ಮುಕ್ತಾಯ ಆಗುವವರೆಗೂ (2023) ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗಿಲ್ಲ.
ಸ್ಪೀಕರ್ ನಡೆಯನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಕದ ತಟ್ಟಿದ್ದರು. ಎರಡೂ ಕಡೆಯ ವಕೀಲರ ವಾದ ಪ್ರತಿವಾದವನ್ನು ಆಲಿಸಿರುವ ಸುಪ್ರೀಂಕೋರ್ಟ್, ಇಂದು ಬೆಳಿಗ್ಗೆ 10.30ರ ವೇಳೆಗೆ ಅಂತಿಮ ತೀರ್ಪು ಪ್ರಕಟಿಸಲಿದೆ.
15 ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ಮುಂದೂಡುವಂತೆ ಸುಪ್ರೀಂಕೋರ್ಟ್ಗೆ ಅನರ್ಹ ಶಾಸಕರ ಪರ ವಕೀಲರು ಕಳೆದ ವಾರ ಮನವಿ ಮಾಡಿದ್ದರು. ಈ ಮನವಿಯನ್ನು ತಳ್ಳಿಹಾಕಿದ್ದ ಕೋರ್ಟ್, ನಿಮಗಾಗಿ ಆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿಯೇ ಹೇಳಿತ್ತು.
ಅನರ್ಹರ ಪರ ವಕೀಲ ಮುಕುಲ್ ರೋಹ್ಟಗಿ, ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್, ದೇವದತ್ತ ಕಾಮತ್, ಪ್ರಸ್ತುತ ಸ್ಪೀಕರ್ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅನರ್ಹ ಶಾಸಕ ಸುಧಾಕರ್ ಪರ ವಕೀಲ ಸುಂದರಂ ಹಾಗೂ ಅನರ್ಹ ಶಾಸಕ ಶ್ರೀಮಂತ ಪಾಟೀಲ ಪರ ವಕೀಲ ವಿ. ಗಿರಿ ವಾದ ಮಂಡಿಸಿದ್ದಾರೆ.