ನವದೆಹಲಿ: ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ಅವರ ರಾಜೀನಾಮೆಯಿಂದ ತೆರವಾದ ಎರಡು ರಾಜ್ಯಸಭಾ ಸ್ಥಾನಗಳಿಗೆ ಇದೀಗ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ವಿದೇಶಾಂಗ ಸಚಿವ ಸುಬ್ರಮಣ್ಯಂ ಜೈಶಂಕರ್ ನಿನ್ನೆಯೇ ನಾಮಪತ್ರ ಸಲ್ಲಿಸಿದ್ದಾರೆ.
ಉಳಿದ ಇನ್ನೊಂದು ಸ್ಥಾನಕ್ಕೆ ಇಂದು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿರುವ ಕನ್ನಡಿಗ ದೀಪಕ್ ಗಂಗಾರಾಮ್ ಕಟಕಂಡು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿರುವುದರಿಂದ ಇವರಿಬ್ಬರ ಆಯ್ಕೆ ಖಚಿತವಾಗಿದೆ.
ಎರಡನೇ ಬಾರಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದು, ಯಾವುದೇ ಮನೆಯ ಸದಸ್ಯತ್ವ ಹೊಂದಿರದ ಈ ಹಿಂದಿನ ಐಎಫ್ಎಸ್ ಅಧಿಕಾರಿ ಜೈಶಂಕರ್ ಅವರನ್ನ ಕೇಂದ್ರ ವಿದೇಶಾಂಗ ಸಚಿವರನ್ನಾಗಿ ಮೋದಿ ಅಚ್ಚರಿಯ ರೀತಿಯಲ್ಲಿ ಆಯ್ಕೆ ಮಾಡಿದ್ದರು. ಈ ಸಂಬಂಧ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಆರು ತಿಂಗಳೊಳಗಾಗಿ ಯಾವುದಾದರೊಂದು ಮನೆಯ( ಲೋಕಸಭೆ ಇಲ್ಲವೇ ರಾಜ್ಯಸಭೆ) ಸದಸ್ಯತ್ವ ಪಡೆಯಬೇಕಾದ ಅನಿವಾರ್ಯತೆ ಜೈಶಂಕರ್ ಅವರಿಗೆ ಇತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗುಜರಾತ್ನಲ್ಲಿ ತೆರವಾಗಿದ್ದ ರಾಜ್ಯಸಭಾ ಸ್ಥಾನಗಳಿಗಾಗಿ ಜೈಶಂಕರ್ ಅವರ ಹೆಸರು ನಿರ್ದೇಶನ ಮಾಡಿದೆ.
ಇನ್ನು ದೀಪಕ್ ಗಂಗಾರಾಮ್ ಕಟಕಂಡು ಮೂಲತ ಕರ್ನಾಟಕದ ವಿಜಯಪುರದವರಾಗಿದ್ದಾರೆ. ಇವರು ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ನೀಡ್ತಾರೆ ಎನ್ನುವುದು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.