ನವದೆಹಲಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ವಿರುದ್ದ ಆಕ್ಷೇಪಾರ್ಹ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಮೂಲದ ಬಿಡಿ ಪತ್ರಕರ್ತ ಪ್ರಶಾಂತ್ ಕನೋಜಿಯಾ ಎಂಬುವರನ್ನು ನಿನ್ನೆ ಉತ್ತರಪ್ರದೇಶ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ. ಇದರ ಬೆನ್ನಲ್ಲೆ, ಯೋಗಿ ವಿರುದ್ಧ ಮಾನಹಾನಿಕರ ಸುದ್ದಿ ಪ್ರಸಾರ ಮಾಡಿದ್ದಕ್ಕೆ ನೊಯ್ಡಾ ಖಾಸಗಿ ವಾಹಿನಿಯ ಮುಖ್ಯಸ್ಥರ ಹಾಗೂ ಸಂಪಾದಕರನ್ನೂ ಬಂಧಿಸಿದ್ದಾಗಿ ತಿಳಿದುಬಂದಿದೆ.
ಕನೋಜಿಯಾ, ಯೋಗಿಗೆ ಮದುವೆ ಪ್ರಸ್ತಾವನೆ ಕಳುಹಿಸಿ ಮಹಿಳೆಯೊಬ್ಬಳು, ಅವರ ಕಚೇರಿ ಎದುರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವ ವಿಡಿಯೋವನ್ನು ಟ್ವಿಟರ್ ಹಾಗೂ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಈ ಕಾರಣಕ್ಕೆ ಕನೋಜಿಯಾ ವಿರುದ್ಧ ಮಾಹಿತಿ ಕಾಯ್ದೆ ಸೆಕ್ಷನ್ 67ರಡಿ ಹಾಗೂ ಕ್ರಿಮಿನಲ್ ಮಾನನಷ್ಟ ಪ್ರಕರಣಗಳಡಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ವ್ಯಕ್ತಿ, ತಾನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ ಹಾಗೂ ಮುಂಬೈ ಯೂನಿವರ್ಸಿಟಿಯ ಹಳೆಯ ವಿದ್ಯಾರ್ಥಿ. ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಟ್ವಿಟರ್ನಲ್ಲಿ ಪತ್ರಕರ್ತನ ಬಂಧನವನ್ನು ಹಲವರು ಖಂಡಿಸಿದ್ದಾರೆ. ಇಂತಹುದೇ ಪ್ರಕರಣದಲ್ಲಿ ನೋಯ್ಡಾದ ಖಾಸಗಿ ಚಾನೆಲ್ನ ಮುಖ್ಯಸ್ಥೆ ಇಶಿಕಾ ಸಿಂಗ್ ಹಾಗೂ ಸಂಪಾಕರಾದ ಅನೂಜ್ ಶುಕ್ಲಾರನ್ನು ಪೊಲೀಸರು ಬಂಧಿಸಿದ್ದಾರೆ. ಕನೋಜಿಯಾ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿರುವ ಮಹಿಳೆ ಜತೆ ಈ ಚಾನೆಲ್ನಲ್ಲಿ ಚರ್ಚೆ ನಡೆಸಿ, ನೇರಪ್ರಸಾರ ಮಾಡಲಾಗಿತ್ತು. ಸತ್ಯಾಸತ್ಯತೆ ಪರಿಶೀಲಿಸದ ಸುದ್ದಿ ಪ್ರಸಾರ ಮಾಡಿದ ಕಾರಣಕ್ಕೆ ದೂರು ದಾಖಲಾಗಿತ್ತು.