ವಾಷಿಂಗ್ಟನ್: ಜೋಕರ್ ಸಿನಿಮಾಗೆ ಮತ್ತೊಂದು ಪ್ರಶಸ್ತಿ ಮುಡಿಗೇರಿದೆ. 77ನೇ ಆವೃತ್ತಿಯ ಗೋಲ್ಡನ್ ಗ್ಲೋಬ್ ಮೋಷನ್ ಪಿಕ್ಚರ್ ವಿಭಾಗದಲ್ಲಿ ಉತ್ತಮ ನಟ ಪ್ರಶಸ್ತಿಯನ್ನು ಜೋಕರ್ ಸಿನಿಮಾದ ನಾಯಕ ಜೋಕ್ವಿನ್ ಫಿನಿಕ್ಸ್ ತಮ್ಮದಾಗಿಸಿಕೊಂಡಿದ್ದಾರೆ. ಈ ಸಿನಿಮಾಗೆ ಪ್ರಶಸ್ತಿ ಬರುತ್ತದೆ ಎಂಬ ಮಾತುಗಳು ಹಾಲಿವುಡ್ನಲ್ಲಿ ಕೇಳಿಬರುತ್ತಿದ್ದುದು ಈಗ ನಿಜವಾಗಿದೆ.
ಜೋಕರ್ ಸಿನಿಮಾದೊಂದಿಗೆ ಹಲವಾರು ಸಿನಿಮಾಗಳ ನಟರು ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಸ್ಪರ್ಧೆ ನಡೆಸಿದ್ದರು. ಫೋರ್ಡ್ ವಿ ಪೆರಾರಿಯ ಕ್ರಿಶ್ಚಿಯನ್ ಬೇಲ್, ಪೇನ್ ಅಂಡ್ ಗ್ಲೋರಿ ಸಿನಿಮಾದ ಆಂಟಾನಿಯೋ ಬಂಡೆರಾಸ್, ಮ್ಯಾರೇಜ್ ಸ್ಟೋರಿಯ ಡ್ರೈವರ್, ದ ಟು ಪೋಪ್ಸ್ ಸಿನಿಮಾದ ಜೋನಾಥನ್ ಪ್ರೈಸ್ ಪ್ರಶಸ್ತಿಗೆ ನಾಮಿನೇಷನ್ ಆಗಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜೋಕ್ವಿನ್ ಫಿನಿಕ್ಸ್, ಆಸ್ಟ್ರೇಲಿಯಾದ ಕಾಳ್ಗಿಚ್ಚಿನ ಬಗ್ಗೆಯೂ ಉಲ್ಲೇಖಿಸಿದ್ದು ವಿಶೇಷವಾಗಿತ್ತು. ''ಹವಾಮಾನ ಬದಲಾವಣೆಯ ದುರಂತಗಳನ್ನು ನಾವು ತಡೆಯಲು ಸಹಕರಿಸಬೇಕು'' ಎಂದ ಅವರು, ''ಈಗಾಗಲೇ ಆಸ್ಟ್ರೇಲಿಯಾಗೆ ತುಂಬಾ ಮಂದಿ ಸಹಾಯಕ್ಕೆ ಹೊರಡುತ್ತಿರುವುದು ನಿಜಕ್ಕೂ ಒಳ್ಳೆಯದು. ಇನ್ನೂ ಹೆಚ್ಚಿನ ಸಹಾಯದ ಅಗತ್ಯ ಇದೆ'' ಎಂದು ಹೇಳಿದ್ದಾರೆ.
ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಅಮೆರಿಕದ ಹಾಲಿವುಡ್ ಪ್ರೆಸ್ ಅಸೋಸಿಯೇಷನ್ ಪ್ರತಿ ವರ್ಷ ನೀಡುತ್ತಿದೆ. ಈ ಸಂಘದಲ್ಲಿರುವ ಸುಮಾರು 88 ಮಂದಿ ಪ್ರಶಸ್ತಿಯನ್ನು ನಿರ್ಣಯಿಸುತ್ತಾರೆ. ಇದುವರೆಗೂ 76 ಆವೃತ್ತಿಗಳು ಪೂರ್ಣಗೊಂಡಿವೆ. 2020ರದ್ದು 77ನೇ ಆವೃತ್ತಿ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 1944ರ ಜನವರಿ 20ರಂದು ನೀಡಲಾಯಿತು. ಮೋಷನ್ ಪಿಕ್ಚರ್ ವಿಭಾಗದಲ್ಲಿ ಸುಮಾರು 15ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಬಾರಿಯ ಉತ್ತಮ ನಾಯಕ ನಟ ಪ್ರಶಸ್ತಿ ಜೋಕರ್ ಜೋಕ್ವಿನ್ ಫಿನಿಕ್ಸ್ಗೆ ಲಭಿಸಿದೆ. ಈ ಸಿನಿಮಾದ ಮೇಲೆ ಇನ್ನೂ ನಿರೀಕ್ಷೆಗಳಿದ್ದು, ಆಸ್ಕರ್ ಪ್ರಶಸ್ತಿ ಕೂಡಾ ಸಿಗುತ್ತದೆ ಎಂಬುದು ಹಾಲಿವುಡ್ ಪಂಡಿತರ ಲೆಕ್ಕಾಚಾರವಾಗಿದೆ.