ಲಾಸ್ ಎಂಜಲೀಸ್: ಆಸ್ಕರ್ ಪ್ರಶಸ್ತಿ ವಿಜೇತ ನಟ ಜೋಕ್ವಿನ್ ಫಿನಿಕ್ಸ್ ಹಾಗೂ ಹಿರಿಯ ನಿರ್ದೇಶಕ ರಿಡ್ಲೇ ಸ್ಕಾಟ್ ಮತ್ತೊಮ್ಮೆ ಒಂದಾಗಲಿದ್ದು, ಕಿಟ್ ಬ್ಯಾಗ್ ಎಂಬ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ.
ಈ ಚಿತ್ರದಲ್ಲಿ ಜೋಕರ್ ಖ್ಯಾತಿಯ ಜೋಕ್ವಿನ್ ಫಿನಿಕ್ಸ್ ಫ್ರೆಂಚ್ ಮಿಲಿಟರಿ ನಾಯಕ ಹಾಗೂ ನೆಪೋಲಿಯನ್ ಬೋನಾಪಾರ್ಟೆ ಅವರ ಪಾತ್ರ ನಿರ್ವಹಿಸಲಿದ್ದಾರೆ.
ಇದಕ್ಕೂ ಮೊದಲು 2000ನೇ ಇಸವಿಯಲ್ಲಿ ಹಲವು ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡ ಗ್ಲಾಡಿಯೇಟರ್ ಚಿತ್ರದಲ್ಲಿ ಸ್ಕಾಟ್ ಮತ್ತು ಫಿನಿಕ್ಸ್ ಕೆಲಸ ಮಾಡಿದ್ದರು. ಈಗ ಕಿಟ್ ಬ್ಯಾಗ್ ಚಿತ್ರ ಘೋಷಣೆಯಾಗಿದ್ದು, ಮತ್ತಷ್ಟು ದಾಖಲೆಗಳನ್ನು ಬರೆಯುವ ನಿರೀಕ್ಷೆಯಿದೆ.
ನೆಪೋಲಿಯನ್ ಬೋನಾಪಾರ್ಟೆಯ ಮೂಲ ಹಾಗೂ ಆತ ಸರ್ವಾಧಿಕಾರಿಯಾಗಿ ಬೆಳೆದುನಿಂತ ಪರಿ, ಆತನ ಜೀವನದಲ್ಲಾದ ಪ್ರಮುಖ ಘಟನೆಗಳ ಬಗ್ಗೆ ಚಿತ್ರದಲ್ಲಿ ಬೆಳಕು ಚೆಲ್ಲಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ನೆಪೋಲಿಯನ್ನ ಪ್ರಮುಖ ಯುದ್ಧಗಳು, ಮಹತ್ವಾಕಾಂಕ್ಷೆ, ಬೆರಗುಗೊಳಿಸುವ ಕಾರ್ಯತಂತ್ರದ ಬಗ್ಗೆ ಚಿತ್ರದಲ್ಲಿ ಮುಖ್ಯವಾಗಿ ಅನಾವರಣಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.
2017ರಲ್ಲಿ ನಿರ್ದೇಶಕ ರಿಡ್ಲೇ ಸ್ಕಾಟ್ ಅವರ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಡೇವಿಡ್ ಸ್ಕಾಪ್ರಾ ಕಿಟ್ಬ್ಯಾಗ್ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದಾರೆ. ''ಟ್ವೆಂಟಿಯತ್ ಸೆಂಚುರಿ ಸ್ಟುಡಿಯೋಸ್''ನಲ್ಲಿ ಸಿನಿಮಾ ಸೆಟ್ಟೇರಲಿದ್ದು, ''ಸ್ಕಾಟ್ ಫ್ರೀ'' ಬ್ಯಾನರ್ ಅಡಿಯಲ್ಲಿ ಚಿತ್ರೀಕರಣಗೊಳ್ಳಲಿದೆ.