ನವದೆಹಲಿ: ಜೆಎನ್‌ಯು ವಿದ್ಯಾರ್ಥಿ ಸಂಘದ ಪರವಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಹಾರ ನೀಡಿದೆ.
ಹೌದು, ಯಾರು ಮುಂದಿನ ಸೆಮಿಸ್ಟರ್ಗೆ ತಮ್ಮ ಹೆಸರನ್ನು ನೋಂದಾಯಿಸಿಲ್ಲವೋ ಅಂತಹ ವಿದ್ಯಾರ್ಥಿಗಳಿಗೆ ಈ ವಾರದಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಹೈಕೋರ್ಟ್ ಅವಕಾಶ ನೀಡಿದೆ. ಜೊತೆಗೆ ವಿದ್ಯಾರ್ಥಿಗಳಿಂದ ತಡವಾಗಿ ಶುಲ್ಕ ಸಂಗ್ರಹಿಸುವಂತಿಲ್ಲ ಎಂದು ನ್ಯಾಯಾಲಯ ವಿಶ್ವವಿದ್ಯಾಲಯ ಆಡಳಿತಕ್ಕೆ ತಿಳಿಸಿದೆ.
ವಿಶ್ವವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳ ಪ್ರಶ್ನಿಸಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅರ್ಜಿಯ ಕುರಿತು ನ್ಯಾಯಮೂರ್ತಿ ರಾಜೀವ್ ಶಖ್ದರ್ ನೇತೃತ್ವದ ನ್ಯಾಯಪೀಠ ಜೆಎನ್‌ಯು ಆಡಳಿತಕ್ಕೆ ನೋಟಿಸ್ ಜಾರಿ ಮಾಡಿದ್ದು, ಇದಕ್ಕ ಎರಡು ವಾರಗಳಲ್ಲಿ ಉತ್ತರಿಸುವಂತೆ ಸೂಚನೆ ನೀಡಿದೆ.
ಇನ್ನೂ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ವಕೀಲ ಅಖಿಲ್ ಸಿಬಲ್, ಜೆಎನ್‌ಯು ಆಡಳಿತವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಬೆಯಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿಲ್ಲ. ವಿದ್ಯಾರ್ಥಿ ಸಂಘದ ಚುನಾವಣೆಗೆ ಯಾವುದೇ ಆಕ್ಷೇಪಣೆ ಇದ್ದರೆ ಅದನ್ನು ಕುಂದುಕೊರತೆ ಪರಿಹಾರ ಸಮಿತಿಯ ಮುಂದೆ ಇರಿಸಿ ಎಂದು ಹೈಕೋರ್ಟ್ ಜೆಎನ್‌ಯು ಆಡಳಿತಕ್ಕೆ ಹಲವು ಬಾರಿ ತಿಳಿಸಿದೆ, ಆದ್ರೆ ಯಾವುದೇ ಸಮಸ್ಯೆಗಳನ್ನು ಕುಂದುಕೊರತೆ ಪರಿಹಾರ ಸಮಿತಿಯ ಮುಂದಿಟ್ಟಿಲ್ಲ ಎಂದು ವಾದಿಸಿದರು.
ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಐಷೆ ಘೋಷ್ ಅವರು ತಮ್ಮ ಅರ್ಜಿಯಲ್ಲಿ ಹಾಸ್ಟೆಲ್ ಶುಲ್ಕವನ್ನು ಹೆಚ್ಚಿಸುವ ನಿರ್ಧಾರವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಹಳೆಯ ಶುಲ್ಕದ ಪ್ರಕಾರವೇ ವಿದ್ಯಾರ್ಥಿಗಳ ಹೆಸರು ನೋಂದಾಯಿಸಲು ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅಲ್ಲದೇ ಚಳಿಗಾಲದ ನೋಂದಣಿ ಶುಲ್ಕವನ್ನು ಸಲ್ಲಿಸದವರಿಗೆ ಲೇಟ್ ಫೀ ವಿಧಿಸದಂತೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.