ಡೆಹರಾಡೂನ್: ಮ್ಯಾನ್ ವರ್ಸಸ್ ವೈಲ್ಡ್ ಪ್ರಧಾನಿಯೊಂದಿಗಿನ ಕಾರ್ಯಕ್ರಮ ಸೋಮವಾರ ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗಿದೆ. ಇದೇ ಮೊದಲ ಬಾರಿಗೆ ಡಿಸ್ಕವರಿ, ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿದೆ.
ಈ ಕಾರ್ಯಕ್ರಮ ನೋಡುಗರು ತಮ್ಮಿಷ್ಟದ ಭಾಷೆಯಲ್ಲೇ ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಅವರೊಂದಿಗಿನ ಬೇರ್ ಗ್ರಿಲ್ಸ್ ಅವರು ನಡೆಸಿಕೊಟ್ಟ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮ ವೀಕ್ಷಿಸಿದ್ದಾರೆ.
'ಮ್ಯಾನ್ VS ವೈಲ್ಡ್': 18 ವರ್ಷದಲ್ಲಿ ಇದು ನನ್ನ ಮೊದಲ ರಜೆ ಎಂದ ನಮೋ!
ಅಂದ ಹಾಗೆ ದೊಡ್ಡ ಸದ್ದು ಮಾಡಿದ ಈ ಕಾರ್ಯಕ್ರಮದ ಶೂಟಿಂಗ್ಗೆ ನಡೆದ ಜಿಮ್ ಕಾರ್ಬೆಟ್ ಪಾರ್ಕ್ ಬರೋಬ್ಬರಿ 1.26 ಲಕ್ಷ ರೂ. ಶುಲ್ಕ ವಸೂಲಿ ಮಾಡಿದೆ ಎಂದು ಪಾರ್ಕ್ ನಿರ್ದೇಶಕರು ತಿಳಿಸಿದ್ದಾರೆ. ಡಿಸ್ಕವರಿ ಚಾನೆಲ್, ಉತ್ತರಾಖಂಡದಲ್ಲಿರುವ ಜಿಮ್ ಕಾರ್ಬೆಟ್ ಪಾರ್ಕ್ಗೆ ಶುಲ್ಕವಾಗಿ ಇಷ್ಟೊಂದು ಹಣ ನೀಡಿದೆ.
ಮೂಲಗಳ ಪ್ರಕಾರ ಜಿಮ್ ಕಾರ್ಬೆಟ್ ಅಭಯಾರಣ್ಯದ ಅತ್ಯಂತ ದುರ್ಗಮವಾದ ಸ್ಥಳಗಳಲ್ಲಿ ಈ ಕಾರ್ಯಕ್ರಮದ ಶೂಟಿಂಗ್ ನಡೆಸಲಾಗಿದೆ. ಕಲಾಗಢ, ಧಿಕಾಲ, ಸಂಭಾರ್ ರೋಡ್, ಗೇಟಿಯಾ ಮತ್ತು ಖೀನೌಲಿ ಪ್ರದೇಶಗಳಲ್ಲಿ ಡಿಸ್ಕವರಿ ಈ ಶೂಟಿಂಗ್ ಮಾಡಿತ್ತು. ಕೆಲ ತಿಂಗಳುಗಳ ಹಿಂದೆಯಷ್ಟೇ ಈ ಕಾರ್ಯಕ್ರಮದ ಚಿತ್ರೀಕರಣ ನಡೆಸಲಾಗಿತ್ತು. ಇದಕ್ಕೆಲ್ಲ ಅಭಯಾರಣ್ಯದ ನಿಯಮಗಳ ಪ್ರಕಾರ ಪ್ರವೇಶ ಶುಲ್ಕ ಸೇರಿದಂತೆ ಇನ್ನಿತರ ಶುಲ್ಕಗಳನ್ನ ವಸೂಲಿ ಮಾಡಲಾಗಿದೆ ಎಂದು ಪಾರ್ಕ್ ನಿರ್ದೇಶಕರು ಹೇಳಿದ್ದಾರೆ.