ಹೈದರಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಹಾಗೂ ಲಡಾಖ್ನ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕಾಶ್ಮೀರ ಕಣಿವೆಯ ಕೆಲ ಭಾಗಗಳಲ್ಲಿ ಒಂದಿಷ್ಟು ಸಮಸ್ಯೆಗಳು ಜೀವಂತವಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಒಪ್ಪಿಕೊಂಡಿದ್ದಾರೆ.
ರಾಷ್ಟ್ರೀಯ ಏಕತಾ ಅಭಿಯಾನದಲ್ಲಿ ಮಾತನಾಡಿದ ಅವರು, ಜಮ್ಮುವಿನ ಜನತೆ ದೇಶದೊಂದಿಗೆ ಹೊಂದಿಕೊಂಡು ಹೋಗಲು ಸಿದ್ಧರಾಗಿದ್ದಾರೆ. ಆದರೆ, ಕಾಶ್ಮೀರ ಕಣಿವೆಯಲ್ಲಿ ಕೆಲವು ಸಮಸ್ಯೆಗಳಿವೆ. ಭಾರತದೊಂದಿಗೆ ಅವಿನಭಾವ ಸಂಬಂಧ ಇರಿಸಿಕೊಂಡಿದ್ದ ಲಡಾಖ್ ಪ್ರಾಂತ್ಯದ ಜನರು ಈಗ ಸಂತೋಷವಾಗಿದ್ದಾರೆ. ಇದು ಅವರ ಬಹುದಿನಗಳ ಕನಸಾಗಿತ್ತು ಎಂದರು.
ಕಾಶ್ಮೀರದಲ್ಲಿನ ಎಲ್ಲರೂ ರಾಷ್ಟ್ರ ವಿರೋಧಿಗಳಲ್ಲ. ಪ್ರತಿ ಕಾಶ್ಮೀರಿಯೂ ಪ್ರತ್ಯೇಕವಾದಿಗಳಲ್ಲ. ಅವರು ಕೂಡ ನಮ್ಮಂತೆಯೇ ಇದ್ದಾರೆ. ಕೇಂದ್ರದ ನಿಲುವಿನ ಬಗ್ಗೆ ಕಾಶ್ಮೀರಿಗರಿಗೆ ಮನವರಿಕೆ ಮಾಡುವ ಕೆಲಸಗಳು ನಡೆಯಲಿವೆ. ಕಾಶ್ಮೀರದ ಅಭಿವೃದ್ಧಿಯ ಜೊತೆಗೆ ಸ್ಥಳೀಯರಿಗೆ ರಾಜಕೀಯ ಹಕ್ಕುಗಳನ್ನು ನೀಡಲು ಬಯಸಿದ್ದೇವೆ. ಬಹತೇಕ ಕಾಶ್ಮೀರಿಗರು ನಮ್ಮ ನಡೆಯನ್ನು ಪ್ರಶಂಸಿದ್ದಾರೆ ಎಂದರು.
ಕೇಂದ್ರ ಸರ್ಕಾರವು ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ಹಾಗೂ 35ಎ ಅನ್ನು ಹಿಂದಕ್ಕೆ ಪಡೆದು, ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್ ಅನ್ನು ವಿಭಜಿಸಲಾಯಿತು.