ಜಲ್ನಾ(ಮಹಾರಾಷ್ಟ್ರ): ಇಲ್ಲಿನ ಸರ್ಕಾರಿ ಕೋವಿಡ್-19 ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ದ್ರವ ಆಮ್ಲಜನಕ ಘಟಕ ಅಳವಡಿಸಿರುವ ಕಾರಣ ರೋಗಿಗಳ ಚೇತರಿಕೆಯ ಪ್ರಮಾಣವನ್ನು ಸುಧಾರಿಸಿದೆ ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು ಆರೋಗ್ಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 15ರಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆಯವರು ಈ ಘಟಕವನ್ನು ಉದ್ಘಾಟಿಸಿದ್ದರು. ಈ ಆಸ್ಪತ್ರೆಯು ಒಂದೇ ಬಾರಿ ಸುಮಾರು 100 ರೋಗಿಗಳಿಗೆ ಆಮ್ಲಜನಕ ಪೂರೈಸುವ ಸಾಮಾರ್ಥ್ಯ ಹೊಂದಿದೆ ಎಂದು ಸಿವಿಲ್ ಸರ್ಜನ್ ಅರ್ಚನಾ ಬೋಸ್ಲೆ ತಿಳಿಸಿದ್ದಾರೆ.
ಆರಂಭದಲ್ಲಿ ಜಿಲ್ಲೆಯಲ್ಲಿ ಕೊರೊನಾದಿಂದ ಸಾವಿನ ಪ್ರಮಾಣವು ಶೇಕಡಾ 4.5ರಷ್ಟಿತ್ತು. ಈಗ ಶೇಕಡಾ 2.8ಕ್ಕೆ ಇಳಿಕೆಯಾಗಿದೆ. ಜಲ್ನಾದಲ್ಲಿ ಚೇತರಿಕೆ ಪ್ರಮಾಣ ಶೇ. 71ರಷ್ಟು ಆಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಸ್ತುತ ಇಲ್ಲಿ 200 ಹಾಸಿಗೆಗಳ ಕೋವಿಡ್-19 ಆಸ್ಪತ್ರೆಯಲ್ಲಿ 238 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 4,808 ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 148 ರೋಗಿಗಳು ಸಾವನ್ನಪ್ಪಿದ್ದಾರೆ ಮತ್ತು 3,269 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಆಸ್ಪತ್ರೆಯು ಟೆಲಿ-ಐಸಿಯು ಸೌಲಭ್ಯವನ್ನು ಸಹ ಪ್ರಾರಂಭಿಸಲಾಗಿದೆ. ಇದು ಪ್ರತೀ ರೋಗಿಯ ಸ್ಥಿತಿಯನ್ನು ಹಾಸಿಗೆಗೆ ಜೋಡಿಸಲಾದ ಮಾನಿಟರ್ ಮೂಲಕ ಬೇರೆ ಸ್ಥಳಗಳಿಂದ ಪರಿಶೀಲಿಸಲು ಸಹಾಯ ಮಾಡುತ್ತದೆ ಎಂದು ಬೊಸ್ಲೆ ಹೇಳಿದರು.
ತೀವ್ರವಾಗಿ ಅನಾರೋಗ್ಯ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ಲಾಸ್ಮಾ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದಿದ್ದಾರೆ.