ಶ್ರೀನಗರ: ಜಮ್ಮು-ಕಾಶ್ಮೀರ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಯೋಧರು ಗಡಿ ನಿಯಮ ಉಲ್ಲಂಘನೆ ಮಾಡಿ ನಿರಂತರವಾಗಿ ಶೆಲ್ ದಾಳಿ ನಡೆಸಿದ್ದು, ಭಾರತೀಯ ಸೇನೆಯ ಮೂವರು ಯೋಧರು ಹುತಾತ್ಮರಾಗಿದ್ದು, ಐವರು ಗಾಯಗೊಂಡಿದ್ದಾರೆ.
ಲ್ಯಾನ್ಸ್ ನಾಯಕ ಕರ್ನಲ್ ಸಿಂಗ್ ಸೇರಿದಂತೆ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಭಾರತೀಯ ಸೇನೆಯನ್ನ ಗುರಿಯಾಗಿಸಿ ಗುಂಡಿನ ದಾಳಿ ನಡೆಸಲಾಗಿದ್ದು, ಇದಕ್ಕೆ ಭಾರತೀಯ ಯೋಧರು ಪ್ರತ್ಯುತ್ತರ ನೀಡುತ್ತಿದ್ದಾರೆ. ಉತ್ತರ ಕಾಶ್ಮೀರದ ಕುಪ್ವಾರ್ ಜಿಲ್ಲೆಯ ನಾಗಮ್ ಸೆಕ್ಟರ್ನಲ್ಲಿ ಪಾಕ್ ಸೇನೆ ಶೆಲ್ ದಾಳಿ ನಡೆಸಲು ಆರಂಭಿಸುತ್ತಿದ್ದಂತೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ನಾಲ್ವರು ಯೋಧರು ಗಾಯಗೊಂಡಿದ್ದು, ಅವರನ್ನ ಆರ್ಮಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದಕ್ಕೂ ಮೊದಲು ನಡೆದ ಪಾಕ್ ನಡೆಸಿದ ಗುಂಡಿನ ದಾಳಿಯಲ್ಲಿ ಪೂಂಚ್ ಸೆಕ್ಟರ್ನಲ್ಲಿ ಓರ್ವ ಸೈನಿಕ ಹುತಾತ್ಮರಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಕಳೆದ ಎಂಟು ತಿಂಗಳಲ್ಲಿ ಪಾಕ್ 3 ಸಾವಿರಕ್ಕೂ ಅಧಿಕ ಸಲ ಕದನ ವಿರಾಮ ಉಲ್ಲಂಘನೆ ಮಾಡಿದೆ.